ಮಾ.3: ಮಲ್ಪೆ ಕಡಲ ಕಿನಾರೆಯಲ್ಲಿ ಪಾಂಚಜನ್ಯ ಸಮಾವೇಶ

ಉಡುಪಿ: ನಮೋ ಭಾರತ್‌ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಪಾಂಚಜನ್ಯ’ ಬೃಹತ್‌ ಸಮಾವೇಶ ಮಲ್ಪೆ ಕಡಲ ತೀರದಲ್ಲಿ ಇಂದು ನಡೆಯಲಿದೆ ಎಂದು ನಮೋಭಾರತ್‌ ಉಡುಪಿ ಸಂಚಾಲಕ ಶಶಾಂಕ್‌ ಶಿವತ್ತಾಯ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 20 ಸಾವಿರ ಜನರು ಬರುವ ನಿರೀಕ್ಷೆ ಇದೆ. ಸಮಾವೇಶದ ಅಂಗವಾಗಿ ಸಂಜೆ 4ಗಂಟೆಗೆ ವಡಾಬಾಂಡೇಶ್ವರದವರೆಗೆ ಮೋದಿ ಅಭಿಮಾನಿಗಳಿಂದ ವಾಹನ ಜಾಥಾ ಜರುಗಲಿದೆ. ಬಳಿಕ ಸ್ವರಭಾರತಿ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ವಡಾಬಾಂಡೇಶ್ವರದಿಂದ ಮಲ್ಪೆ ಕಡಲ ತೀರದವರೆಗೆ ಪಾದಯಾತ್ರೆ ಜರುಗಲಿದೆ. ಸಂಜೆ 5.30ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆ ಮೀನಾಕ್ಷಿ ಲೇಖಿ ಭಾಗವಹಿಸುವರು ಎಂದು ತಿಳಿಸಿದರು.
ಪ್ರಸ್ತುತ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ಕ್ರಿಯಾಶೀಲ ನಾಯಕತ್ವದ
ಅಗತ್ಯ ಎಷ್ಟಿದೆ ಎಂಬುವುದನ್ನು ಜನಸಾಮಾನ್ಯರಿಗೆ ತಿಳಿಸುವುದು ಹಾಗೂ ಕೇಂದ್ರ ಸರ್ಕಾರದ ಜನ ಸ್ನೇಹಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ನಮೋ ಭಾರತ್‌ ಸಂಘಟನೆಯನ್ನು ಹುಟ್ಟುಹಾಕಲಾಗಿದೆ. ನರೇಂದ್ರ ಮೋದಿ ಅವರನ್ನು ಪಕ್ಷತೀತವಾಗಿ ಪ್ರೀತಿಸುವ ದೊಡ್ಡ ಬಳಗ ದೇಶದಲ್ಲಿದೆ. ಆದರೆ ಪ್ರೀತಿ, ಅಭಿಮಾನಗಳು ನಿರ್ಣಾಯಕ ಕಾಲಘಟ್ಟದಲ್ಲಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಇದಕ್ಕಾಗಿ ಪಕ್ಷಾತೀತ ಅಭಿಯಾನದ ಅಗತ್ಯವಿದೆ. ಹಾಗಾಗಿ ಸಂಘಟನೆಯ ವತಿಯಿಂದ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂಬ ಆಶಯದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಮೋ ಭಾರತ್‌ ಸಂಘಟನೆ ಸದಸ್ಯರಾದ ಕಾರ್ತಿಕ್‌ ಕುಂದರ್‌, ಅವಿನಾಶ್‌ ಶೆಟ್ಟಿ ಗೋಳಿಯಂಗಡಿ, ಚೈತ್ರಾ ಕೋಟಾ ಇದ್ದರು.