ಉಡುಪಿ: ಉಡುಪಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು ಅರ್ಹ ಮಕ್ಕಳ ಸಂಖ್ಯೆ 77740 ( ಗ್ರಾಮೀಣ ಪ್ರದೇಶ 63630, ನಗರ ಪ್ರದೇಶ 14110) ಇದ್ದು, ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಒಟ್ಟು ಲಸಿಕಾ ಕೇಂದ್ರಗಳು 657 (ಗ್ರಾಮೀಣ ಪ್ರದೇಶ 569, ನಗರ ಪ್ರದೇಶ 88). ಇದಲ್ಲದೆ 9 ಮೊಬೈಲ್ ಟೀಮ್ ಮತ್ತು 32 ಟ್ರಾನ್ಸಿಟ್ ಬೂತ್ಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಲಸಿಕಾ ಸ್ವಯಂ ಸೇವಕರ ಸಂಖ್ಯೆ 2774 ಮತ್ತು ಮೇಲ್ವಿಚಾರಕರು 137, ಇದಲ್ಲದೆ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲ್ಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮವು ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ, ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ನಡೆಸಲಾಗುವುದು.
ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋವನ್ನು ಮಾ. 10 ರಂದು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿ ಸಹಕರಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಮಾ. 11 ಮತ್ತು 12 ರಂದು ಹಾಗೂ ನಗರ ಪ್ರದೇಶದಲ್ಲಿ ಮಾ. 11 ರಿಂದ 13 ರ ತನಕ ಸ್ವಯಂ ಸೇವಕರು ಮನೆ ಮನೆ ಭೇಟಿ ನೀಡಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಿಸಿದ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ.
ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯು ಮಾ.10 ರಂದು ಬೆಳಗ್ಗೆ 8 ಕ್ಕೆ ಬೀಡಿನಗುಡ್ಡೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ತಿಳಿಸಿದ್ದಾರೆ.