ಉಡುಪಿ: ಜನರಿಗೆ ಅತೀ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗಬೇಕು. ಆ ನಿಟ್ಟಿನಲ್ಲಿ ಕರಾವಳಿಯಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿದರು. ಅವರು ಮಂಗಳವಾರ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಮರಳುಗಾರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನೇತೃತ್ವದಲ್ಲಿ ಮರಳು ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಎರಡನೇ ದಿನದ ಧರಣಿಯಲ್ಲಿ ಭಾಗವಹಿಸಿ ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅದಿಕಾರಿಗಳೊಂದಿಗೆ ನಡೆದಂತಹ ಸಭೆಗಳಲ್ಲಿ
ಜಿಲ್ಲೆಯ ಮರಳು ಸಮಸ್ಯೆಯನ್ನು ಬಗಹರಿಸುವ ಭರವಸೆಯನ್ನು ನೀಡಿದ್ದೇವೆ. ಅದರಂತೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ ನಡೆಸಿ, ಮರಳು ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ಮರಳು
ಸಮಸ್ಯೆಯನ್ನು ಬಗೆಹರಿಸಬೇಕು. ಎಲ್ಲ 171 ಮಂದಿಗೂ ಪರವಾನಗಿ ನೀಡಬೇಕು. ಕುಂದಾಪುರ ಹಾಗೂ ಬೈಂದೂರು ಪ್ರದೇಶವನ್ನು ಸೂಕ್ಷ್ಮಪ್ರದೇಶವೆಂದು ಗುರುತಿಸಿರುವುದರಿಂದ ಅಲ್ಲಿ ಆ ಭಾಗದಲ್ಲಿ ಮರಳು ತೆಗೆಯಲು ಅವಕಾಶ ಇಲ್ಲ. ಈ ಸಮಸ್ಯೆಯನ್ನು ಆದಷ್ಟು ಪರಿಹರಿಸಬೇಕು. ಹಾಗೆಯೇ ನಾನ್ ಸಿಆರ್ಝಡ್ ವ್ಯಾಪ್ತಿಯಲ್ಲೂ ಮರಳುಗಾರಿಕೆ ಆರಂಭಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಸೃಷ್ಟಿಯಾಗಲು ಜಿಲ್ಲಾಧಿಕಾರಿಗಳೇ ಕಾರಣ. ಅವರನ್ನು ಮೊದಲು ವರ್ಗಾವಣೆ ಮಾಡಬೇಕು ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರವೀಣ್ ಸುವರ್ಣ ಒತ್ತಾಯಿಸಿದರು. ಜಿಲ್ಲೆಯ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಜಿಲ್ಲಾಧಿಕಾರಿ ರಕ್ಕಸರಂತೆ ವರ್ತಿಸುತ್ತಿದ್ದಾರೆ. ಏಳು ಮಂದಿ ಮರಳು ಸಮಿತಿಯಲ್ಲಿರುವ ದಿನೇಶ್ ಸುವರ್ಣ ಓರ್ವ ಭ್ರಷ್ಟ. ಆತ ಎಲ್ಲ ಪರವಾನಗಿದಾರರಿಂದಲೂ ತಲಾ 50 ಸಾವಿರ ಹಣ ವಸೂಲಿ ಮಾಡುತ್ತಾನೆ. ಆತನನ್ನು ಸಮಿತಿಯಿಂದ ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ ಹಾಗೂ ಮರಳು ಹೋರಾಟ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.