ನವದೆಹಲಿ: ಭಾರತ ಏಕದಿನ ವಿಶ್ವಕಪ್ 2023 ರ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ (ICC Cricket World Cup 2023). ಟೀಮ್ ಇಂಡಿಯಾ (IND vs AFG) ದೆಹಲಿ ಮೈದಾನದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.ಇಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ತನ್ನ ಆಡುವ 11 ಆಟಗಾರರ ಬಳಗದಲ್ಲಿ ಹೆಚ್ಚು ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರೆ ಸೂಕ್ತ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ಗೆ ಯೋಗ್ಯವಾಗಿರುವ ಈ ಮೈದಾನದಲ್ಲಿ ಹೆಚ್ಚುವರಿ ಬ್ಯಾಟ್ಸ್ಮನ್ನೊಂದಿಗೆ ಕಣಕ್ಕೆ ಇಳಿಯುವುದು ಉತ್ತಮ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಸಲಹೆ ನೀಡಿದ್ದಾರೆ.
ದೆಹಲಿಯ ಪಿಚ್ ಬ್ಯಾಟಿಂಗ್‌ಗೆ ಸ್ವರ್ಗವಾಗಿದೆ. ಅದಕ್ಕಿಂತ ಮುಖ್ಯವಾಗಿ ಸ್ಪಿನ್ನರ್‌ಗಳ ಕೊಡುಗೆ ತೀರಾ ಕಡಿಮೆ. ಹಾಗಾಗಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುವುದು ಕಷ್ಟ. ಭಾರತ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸುಧಾರಿಸಬೇಕಾಗಿದೆ. ಅದೇ ರೀತಿ ಪೇಸ್ ಬೌಲಿಂಗ್ ಕೂಡ ಬಲಗೊಳ್ಳಬೇಕು. ಅದಕ್ಕಾಗಿ ಅಶ್ವಿನ್ ಬದಲಿಗೆ ಶಾರ್ದೂಲ್ ಠಾಕೂರ್ ಅಥವಾ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.ಹೆಚ್ಚುವರಿ ಬ್ಯಾಟ್ಸ್ಮನ್ ಕಣಕ್ಕೆ ಇಳಿಸುವುದರಿಂದ ಸ್ಪಿನ್ನರ್‌ನನ್ನು ಕೈಬಿಟ್ಟು ಪೇಸ್ ಆಲ್‌ರೌಂಡರ್ ತೆಗೆದುಕೊಳ್ಳಬೇಕು. ಡೆಲ್ಲಿ ಮೈದಾನ ಬ್ಯಾಟಿಂಗ್‌ಗೆ ಸೂಕ್ತವಾಗಿದೆ. ಸ್ಪಿನ್ನರ್‌ಗಳ ಪ್ರಭಾವ ತೀರಾ ಕಡಿಮೆ ಎಂದು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಅವರು ಉದಾಹರಣೆಯಾಗಿ ಬಹಿರಂಗಪಡಿಸಿದರು. ಆದರೆ, ಆಫ್ಘನ್ ತಂಡದಲ್ಲಿ ಸ್ಪಿನ್ನರ್‌ಗಳೇ ಪ್ರಮುಖರು ಎಂದು ಪ್ರತಿಕ್ರಿಯಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಸಂಪೂರ್ಣ ವೇಗಿಯಂತೆ ಕಾಣುತ್ತಿಲ್ಲ. ಅವರನ್ನು ಮೂರನೇ ವೇಗದ ಬೌಲರ್ ಎಂದು ಪರಿಗಣಿಸಲಾಗುವುದಿಲ್ಲ. ಅವರು ಒತ್ತಡವನ್ನು ಅನುಭವಿಸುತ್ತಾರೆ. ಇದು ಆಸೀಸ್ ವಿರುದ್ಧದ ಪಂದ್ಯದಲ್ಲಿ ಸ್ಪಷ್ಟವಾಗಿದೆ ಎಂದರು.
ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದಾರೆ. ಆಸೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಅಗ್ರ-3 ಬ್ಯಾಟ್ಸ್ ಮನ್ಗಳು ಡಕ್ ಔಟ್ ಆಗಿದ್ದು ಗೊತ್ತೇ ಇದೆ. ಈ ಬಾರಿ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ. ಅಫ್ಘಾನಿಸ್ತಾನವನ್ನು ಕಡಿಮೆ ಅಂದಾಜು ಮಾಡುದ್ರೆ ಸೋಲು ಖಚಿತ. ಬಲಿಷ್ಠ ತಂಡಗಳಿಗೆ ಆಘಾತ ನೀಡುವ ಸಾಮರ್ಥ್ಯ ಆ ತಂಡಕ್ಕಿದೆ.ದೆಹಲಿ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ-ಶ್ರೀಲಂಕಾ ಪಂದ್ಯದಲ್ಲಿ ರನ್ಗಳ ಹೊಳೆಯೇ ಹರಿದಿತ್ತು. ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 428/5 ಸ್ಕೋರ್ ಮಾಡಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಶ್ರೀಲಂಕಾ 326 ರನ್ ಗಳಿಸಿತು. ಒಂದೇ ಪಂದ್ಯದಲ್ಲಿ 750ಕ್ಕೂ ಹೆಚ್ಚು ರನ್ ದಾಖಲಾಗಿರುವುದು ಗಮನಾರ್ಹ.