ಮಣಿಪಾಲ ಯೂನಿವರ್ಸಲ್‌ ಪ್ರೆಸ್‌ನ ಎರಡು ಕೃತಿ ಲೋಕಾರ್ಪಣೆ

ಉಡುಪಿ: ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯ ಪ್ರಸಾರಾಂಗ ವಿಭಾಗವಾದ ಮಣಿಪಾಲ ಯೂನಿವರ್ಸಲ್‌ ಪ್ರೆಸ್‌ನ ಎರಡು ಪ್ರಕಟಣೆಗಳಾದ “ಸಾಮಾಜಿಕ ಸಮನ್ವಯದ ಹರಿಕಾರ- ಕನಕದಾಸರು” ಮತ್ತು “ಭಾಷಾಂತರ: ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ” ಕೃತಿಗಳನ್ನು ಮಾಹೆಯ ಕುಲಪತಿ ಡಾ. ಎಂ.ಡಿ. ವೆಂಕಟೇಶ್‌ ಹಾಗೂ ಎಕ್ಸಿಕ್ಯೂಟಿವ್‌ ವೈಸ್‌ ಪ್ರೆಸಿಡೆಂಟ್‌ ಡಾ. ಎಚ್‌. ವಿನೋದ ಭಟ್‌ ಅವರು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಬಿಡುಗೊಳಿಸಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಎಂ.ಡಿ. ವೆಂಕಟೇಶ್‌, ಮಣಿಪಾಲ ಯೂನಿವರ್ಸಲ್‌ ಪ್ರೆಸ್‌ ಸಂಸ್ಥೆ ಕಳೆದ 10 ವರ್ಷಗಳಲ್ಲಿ 216 ಪುಸ್ತಕಗಳನ್ನು ಪ್ರಕಟಿಸಿದೆ. ಸಂಸ್ಕೃತ, ಕನ್ನಡ ಸಹಿತ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಸಂಸ್ಥೆ ಆದ್ಯತೆ ನೀಡದೆ. ಇದು ಯಾವುದೇ ವಿಶ್ವವಿದ್ಯಾನಿಲಯಕ್ಕೆ ಮಹತ್ವ ಸಂಗತಿಯಾಗಿದೆ ಎಂದರು.

ವಿವಿಗಳು ಪ್ರಕಾಶನ ಸಂಸ್ಥೆಗಳನ್ನು ಹೊಂದುವುದು ಅತೀ ಅಗತ್ಯ. ಇದರಿಂದ ಜ್ಞಾನ ಪ್ರಸಾರ ಮಾಡಲು ಸುಲಭವಾಗಲಿದೆ. ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಈಗ ದೇಶದಲ್ಲಿ ಮುಂಚೂಣಿಯ ಪ್ರಕಟನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.

ಡಾ. ಎಚ್‌. ವಿನೋದ ಭಟ್‌ ಮಾತನಾಡಿ, ಪ್ರಕಾಶನ ಸಂಸ್ಥೆಗಳಲ್ಲಿ ಹೆಚ್ಚಾಗಿ ಆರೋಗ್ಯ, ಪ್ರವಾಸೋದ್ಯಮ, ಇತಿಹಾಸ, ಸಾಹಿತ್ಯ ಹಾಗೂ ಮನೋರಂಜನೆ ಸಹಿತ ವಿವಿಧ ವಿಭಾಗಳಿರುತ್ತವೆ. ಆದರೆ ಒಂದು ವಿವಿಯಾಗಿ ಮಾಹೆ ಕೆಲವು ನಿರ್ದಿಷ್ಟ ಚೌಕಟ್ಟುಗಳನ್ನು ಹಾಕಿಕೊಂಡಿದ್ದು, ಆರೋಗ್ಯ ಮತ್ತು ಶಿಕ್ಷಣ ಸಂಬಂಧಿಸಿದ ಗುಣಮಟ್ಟದ ಪುಸ್ತಕಗಳ ಪ್ರಕಟಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಲೇಖಕರಾದ ಪ್ರೊ. ಪಿ. ಆರ್‌. ಪಂಚಮುಖಿ, ಪ್ರೊ. ಎನ್‌. ಟಿ. ಭಟ್‌, ನಿವೃತ್ತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್‌, ಲೇಖಕಿ ಡಾ. ಪಾರ್ವತಿ ಜಿ. ಐತಾಳ್‌ ಉಪಸ್ಥಿತರಿದ್ದರು. ಮಣಿಪಾಲ ಯೂನಿವರ್ಸಲ್‌ ಪ್ರೆಸ್‌ನ ಪ್ರಧಾನ ಸಂಪಾದಕಿ ಪ್ರೊ. ನೀತಾ ಇನಾಂದಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ‌ ಮಾತನಾಡಿದರು.