ಮಣಿಪಾಲ: ರಾಜೀವನಗರ ಕ್ರಿಕೆಟರ್ಸ್ ರಾಜೀವನಗರ ಸಂಸ್ಥೆಯ ಆಶ್ರಯದಲ್ಲಿ ಅಂಗವಿಕಲ ಹಾಗೂ ಬಡಜನರ ಸಹಾಯಾರ್ಥವಾಗಿ ರಾಜೀವನಗರ ಆರ್ ಸಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ 9ನೇ ವರ್ಷದ ಕ್ರಿಕೆಟ್ ಪಂದ್ಯಕೂಟ ‘ಆರ್ ಸಿ ಟ್ರೋಫಿ-2021’ ಶನಿವಾರ ಉದ್ಘಾಟನೆಗೊಂಡಿತು.
ಟೂರ್ನಿಗೆ ಚಾಲನೆ ನೀಡಿ 80ಬಡಗಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಾಂತಾರಾಮ ಶೆಟ್ಟಿ ಮಾತನಾಡಿ,
ಆರ್ ಸಿ ತಂಡ ಕ್ರೀಡಾಕೂಟ ಆಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಇಂದು ಎಲ್ಲರೂ ಪ್ರಚಾರದಿಂದ ದೃಷ್ಟಿಯಿಂದ ಸಾಮಾಜಿಕ ಕಾರ್ಯ ಮಾಡುತ್ತಾರೆ. ಆದರೆ ಇದಕ್ಕೆ ಆರ್ ಸಿ ತಂಡದ ಮುಖ್ಯಸ್ಥ ಸುನೀಲ್ ಶೇರಿಗಾರ್ ತದ್ವಿರುದ್ಧ. ತಾನು ಮಾಡಿದ ಸಹಾಯ ‘ಬಲ ಕೈಗೆ ಕೊಟ್ಟದ್ದು ಎಡ ಕೈಗೆ ಗೊತ್ತಾಗಬಾರದು’ ಎಂಬ ರೀತಿಯ ಮನೋಭಾವ ಹೊಂದಿರುವ ವ್ಯಕ್ತಿ. ಲಾಕ್ ಡೌನ್ ಸಂದರ್ಭದಲ್ಲಿ ಅವರು ಮಾಡಿರುವ ಸಾಮಾಜಿಕ ಸೇವೆಯೇ ಅದಕ್ಕೆ ಸಾಕ್ಷಿ. ಇಂತಹ ವ್ಯಕ್ತಿತ್ವ ಇರುವವರು ಬಹಳ ವಿರಳ ಎಂದು ಶ್ಲಾಘಿಸಿದರು.
ಒಂದು ಸಂಸ್ಥೆ ಹುಟ್ಟು ಹಾಕುವುದು ಸುಲಭ. ಆದ್ರೆ ಅದನ್ನು ಹತ್ತು ವರ್ಷಗಳ ಕಾಲ ಮುನ್ನಡೆಸಿಕೊಂಡು ಬರುವುದು ಬಹಳ ಕಷ್ಟ. ಅಂಗವಿಕಲ ಹಾಗೂ ಬಡಜನರಿಗೆ ಸಹಾಯಹಸ್ತ ಚಾಚುವ ಮೂಲಕ ಆರ್ ಸಿ ತಂಡ ತನ್ನ ಸಾಮಾಜಿಕ ಬದ್ಧತೆಯನ್ನು ತೋರಿಸಿದೆ ಎಂದರು.
ಆರ್ ಸಿ ತಂಡದ ಸಲಹೆಗಾರ, ಸಾಮಾಜಿಕ ಕಾರ್ಯಕರ್ತ ಸುಧೀರ್ ನಾಯಕ್ ಮಾತನಾಡಿ, ಆರ್ ಸಿ ತಂಡದ ಸಾಧನೆಯ ಬಗ್ಗೆ ವಿವರಿಸಿದರು.
ಆರ್ ಸಿ ಕ್ರಿಕೆಟರ್ಸ್ ಸಂಸ್ಥೆಯ ಮುಖ್ಯಸ್ಥರಾದ ಸುನೀಲ್ ಶೇರಿಗಾರ್, ನಾಗರಾಜ (ರಾಜ) ಶೇರಿಗಾರ್, ಗ್ರಾಪಂ ಸದಸ್ಯರು ಆಗಿರುವ ಆರ್ ಸಿ ತಂಡದ ಅಧ್ಯಕ್ಷ ಸುಧೀರ್ ಪೂಜಾರಿ, ಸುಧೀರ್ ನಾಯಕ್, ಬಾಷಾ ಪೂಜಾರಿ ಹಾಗೂ ಆರ್ ಸಿ ತಂಡದ ಸದಸ್ಯರು ಉಪಸ್ಥಿತರಿದ್ದರು.