ಮಣಿಪಾಲ ಕೆಎಂಸಿ ಆಸ್ಪತ್ರೆಯ ಕೆಲ ಹೊರರೋಗಿ ವಿಭಾಗಗಳು ಸೇವೆಗೆ ಲಭ್ಯ

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಕೆಲ ಹೊರ ರೋಗಿಗಳ ವಿಭಾಗಗಳು ಏಪ್ರಿಲ್  15ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೇವೆಗೆ ಲಭ್ಯವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಸಾಮಾನ್ಯ ವೈದ್ಯಕೀಯ ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ, ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗ, ಮಕ್ಕಳ ವಿಭಾಗ, ಅಲರ್ಜಿ ಮತ್ತು ಶ್ವಾಸಕೋಶ ವಿಭಾಗ, ಮೂಳೆ ವಿಭಾಗ, ವೈದ್ಯಕೀಯ ಕ್ಯಾನ್ಸರ್ ವಿಭಾಗ, ಶಸ್ತ್ರಚಿಕಿತ್ಸಾ ಕ್ಯಾನ್ಸರ್ , ಮಕ್ಕಳ ರಕ್ತಶಾಸ್ತ ಮತ್ತು ಕ್ಯಾನ್ಸರ್ ಶಾಸ್ತ್ರ , ಪ್ರಶಾಮಕ ಆರೈಕಾ ವಿಭಾಗ, ರೇಡಿಯೋಥೆರಪಿ ಆಂಕೋಲಜಿ ವಿಭಾಗ ಹೃದಯ ಶಾಸ್ತ್ರ , ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಶಾಸ್ತ್ರ ವಿಭಾಗಗಳ ಹೊರರೋಗಿ ವಿಭಾಗಗಳು ಒಳಗೊಂಡಿವೆ. ಸಾರ್ವಜನಿಕರು ಮತ್ತು ರೋಗಿಗಳು ಈ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.
ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ನಂತರ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು. ಹಾಗೆಯೇ ಪ್ರತಿ ರೋಗಿಗಳೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮಣಿಪಾಲ ಮಾಹೆಯ ಉಡುಪಿ ಡಾ. ಟಿ ಎಂ ಎ ಪೈ ಆಸ್ಪತ್ರೆಯನ್ನು ಕೊರೋನಾ ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿರುವುದರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೆಲ ಹೊರರೋಗಿ ವಿಭಾಗದ ಸೇವೆಗಳು ಎಂದಿನಂತೆ ಸೇವೆಗೆ ಮುಕ್ತಗೊಳಿಸಿದ್ದೇವೆ ಎಂದು ಆಸ್ಪತ್ರೆಯ ಡೀನ್ ಡಾ. ಶರತ್ ರಾವ್ ತಿಳಿಸಿದ್ದಾರೆ.
ಆದಾಗ್ಯೂ ಟೆಲಿಮೆಡಿಸಿನ್ ಮೂಲಕ ವೈದ್ಯರ ಸಮಾಲೋಚನಾ ಸೇವೆಯು ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರ ವರೆಗೆ ಲಭ್ಯವಿದೆ. ಸಾರ್ವಜನಿಕರು 080-47192235 ಗೆ ಕರೆಮಾಡಬಹುದು.