ಮಣಿಪಾಲ: ಮಣಿಪಾಲ ಪರಿಸರದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದ ಇತ್ತೀಚೆಗೆ ಮಣಿಪಾಲದ ಕೆ.ಎಫ್‌ಸಿ ಹೋಟೆಲ್ ಬಳಿ ರಾತ್ರಿ ವೇಳೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಮೊಬೈಲ್, ವಾಚ್ ಮತ್ತು ನಗದು ಸುಲಿಗೆ ಮಾಡಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಆಶಿಫ್ ಹಾಗೂ ದಸ್ತಗೀರ್ ಬೇಗ್ ಬಂಧಿತ ಆರೋಪಿಗಳು. ಈ ಇಬ್ಬರು ಸುಲಿಗೆಕೋರರು ಜ.31ರಂದು ಮಧ್ಯರಾತ್ರಿ 12.15 ಸುಮಾರಿಗೆ ಸಿಗರೇಟು ಕೇಳುವ ನೆಪಮಾಡಿಕೊಂಡು ಮಣಿಪಾಲದ ಕೆ.ಎಫ್.ಸಿ ಬಿಲ್ಡಿಂಗ್ ಬಳಿಯಿದ್ದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಯರ ಬಳಿಗೆ ಹೋಗಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ, ಅವರ ಬಳಿಯಿದ್ದ 2 ಮೊಬೈಲ್ ಗಳು 250 ರೂಪಾಯಿ ನಗದು ಹಣ ಹಾಗೂ ಇಯರ್ ಫೋನ್‌ಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಎಸ್‌ಪಿ ಎನ್.ವಿಷ್ಣುವರ್ಧನ ಆರೋಪಿಗಳ ಪತ್ತೆಗೆ ಅಡಿಷನಲ್ ಎಸ್‌ಪಿ ಕುಮಾರಚಂದ್ರ ಮತ್ತು ಡಿವೈಎಸ್‌ಪಿ ಸುಧಾಕರ ನಾಯಕ್ ಅವರ ಮೇಲುಸ್ತುವಾರಿಯಲ್ಲಿ ಆರೋಪಿತರನ್ನು ಪತ್ತೆ ಮಾಡಲು ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ ಅವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದರು.
ತನಿಖಾ ತಂಡದ ಸದಸ್ಯರಾದ ಪಿಎಸ್‌ಐ ರಾಜ್‌ಶೇಖರ ವಂದಲಿ, ಪ್ರೊ.ಪಿ.ಎಸ್‌ಐ ನಿರಂಜನ್ ಗೌಡ ಮತ್ತು ದೇವರಾಜ ಬಿರದಾರ, ಎಎಸ್‌ಐ ಶೈಲೇಶ್‌ಕುಮಾರ್ , ಹೆಚ್ ಸಿ ಮಹೇಶ್ , ಅಬ್ದುಲ್ ರಾಜಾಕ್, ಥಾಮ್ಸನ್, ಪ್ರಸನ್ನ , ವಿಶ್ವಜಿತ್ , ಪಿಸಿ ಮೊಹಮ್ಮದ್ ರಫೀಕ್, ಆದರ್ಶ ನಾಯ್ಕ ರವರು ಹಾಗೂ ಸಿಡಿಆರ್ ಘಟಕದ ದಿನೇಶ್ ಮುಂಬೈ, ಥಾಣೆ, ಬೆಂಗಳೂರು, ಶಿವಮೊಗ್ಗಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಶಿವಮೊಗ್ಗದಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಹೋಂಡಾ ಸಿವಿಕ್ MH-04-CT-1339 ನೇ ಕಾರ್, 2 Android ಮೊಬೈಲ್ ಪೋನ್ ಮತ್ತು ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ರಾತ್ರಿ ವೇಳೆ ಎಚ್ಚರವಹಿಸಿ: ಎಸ್ಪಿ ಕರೆ ಮಣಿಪಾಲದಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ತಿರುಗಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಎಸ್ಪಿ ವಿಷ್ಣುವರ್ಧನ ಅವರು ಮನವಿ ಮಾಡಿದ್ದಾರೆ.