ಉಡುಪಿ: ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆ ತೆರಳಿ ಚಿನ್ನಾಭರಣ ದೋಚುವ ಮಹಿಳಾ ಗುಂಪೊಂದು ಉಡುಪಿಯಲ್ಲಿ ಕಾರ್ಯಾಚರಿಸುತ್ತಿದೆ ಎನ್ನುವುದಾಗಿ ಮಣಿಪಾಲ ಪೊಲೀಸರು ಪ್ರಕಟಣೆ ನೀಡಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಮಣಿಪಾಲ ಪೊಲೀಸರು ‘ಇದೊಂದು ಸುಳ್ಳು ಪ್ರಕಟಣೆಯಾಗಿದ್ದು, ಇಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಿನಾಯಿಲ್ ಮಾರುವ ಮಹಿಳಾ ತಂಡವೊಂದು ಉಡುಪಿಗೆ ಬಂದಿದ್ದು, ಇವರು ಮನೆ ಮನೆಗೆ ತೆರಳಿ ಪಿನಾಯಿಲ್ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಸುಮಾರು ಐದರಿಂದ ಆರು ಜನ ಹೆಣ್ಣು ಮಕ್ಕಳ ಗುಂಪೊಂದು ಉಡುಪಿಯಲ್ಲಿ ಕಾರ್ಯಾಚರಿಸುತ್ತಿದೆ. ಇಂತಹವರು ತಮ್ಮ ಮನೆಯ ಸುತ್ತಮುತ್ತ ಓಡಾಡಿದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮಣಿಪಾಲ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ ಎಂಬ ಸಂದೇಶ ಹರಿದಾಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್, ಇದೊಂದು ಸುಳ್ಳು ಪ್ರಕಟಣೆ. ನಾವು ಇಂತಹ ಯಾವುದೇ ಪ್ರಕಟಣೆಯನ್ನು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.