ಮಣಿಪಾಲ: ಅಂತರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗವು ಇಂದು ಆಚರಿಸಿತು.
ಕೆಎಂಸಿ ಡೀನ್ ಡಾ. ಶರತ್ ಕೆ ರಾವ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಜಂಟಿಯಾಗಿ ಕ್ಯಾನ್ಸರ್ ನಿಂದ ಮುಕ್ತರಾದ ಮಕ್ಕಳೊಂದಿಗೆ ಸೇರಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಶರತ್ ರಾವ್ ಅವರು, ಪ್ರತೀ ವರ್ಷ ಜಗತ್ತಿನಾದ್ಯಂತ ಸುಮಾರು ಮೂರು ಲಕ್ಷ ಮಕ್ಕಳು ಹೊಸದಾಗಿ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಭಾರತದಲ್ಲಿ ಇದರ ಸಂಖ್ಯೆ 40ಸಾವಿರದಿಂದ 45 ಸಾವಿರದಷ್ಟು. ಸರಿಯಾದ ಸಮಯದಲ್ಲಿ ರೋಗ ಪತ್ತೆ ಹಚ್ಚಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿದರೆ, ಮಕ್ಕಳ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.
ಡಾ. ಅವಿನಾಶ್ ಶೆಟ್ಟಿ ಮಾತನಾಡಿ, 2021ರಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ಕ್ಯಾನ್ಸರ್ ಅನ್ನು ಒಂದು ಪ್ರಮುಖ ರೋಗವೆಂದು ಗುರುತಿಸಿದೆ. ಹಾಗೆ 2030ರ ಹೊತ್ತಿಗೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಶೇ. 60 ರಿಂದ 65 ರಷ್ಟು ಗುಣಪಡಿಸುವ ಗುರಿಯನ್ನು ಇಟ್ಟುಕೊಂಡಿದೆ. ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಅತ್ಯಾಧುನಿಕ ವ್ಯವಸ್ಥೆ ಇದೆ ಎಂದು ಹೇಳಿದರು.
ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಡಾ. ಶುಭ ಸೂರಿಯ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್ ಸಲಿನ್ಸ್ ಮತ್ತು ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ ಉಪಸ್ಥಿತರಿದ್ದರು.