ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಸಂಕೀರ್ಣವಾದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, ಇದನ್ನು ಭಾರತದ ಕೆಲವೇ ಪ್ರತಿಷ್ಠಿತ ಕ್ಯಾನ್ಸರ್ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.
ಶ್ವಾಸ ನಾಳದ (ವಿಂಡ್‌ಪೈಪ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಒಂದು ಕ್ಲಿಷ್ಟವಾದ ಮತ್ತು ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದ್ದು, ಅಲ್ಲಿ ಕ್ಯಾನ್ಸರ್ ಗೆಡ್ಡೆಯ ಜೊತೆಗೆ ಶ್ವಾಸ ನಾಳದ ಭಾಗವನ್ನು ತೆಗೆದುಹಾಕಲಾಗುತ್ತದೆ. ಉಳಿದ ಶ್ವಾಸ ನಾಳವನ್ನು ಕೆಳಗಿನ ಭಾಗ ಅಥವಾ ಶಾಖೆಗಳಿಗೆ (ಮುಖ್ಯ ಬ್ರಾಂಕಸ್) ಸಂಪರ್ಕಿಸಲಾಗುತ್ತದೆ. ಶ್ವಾಸ ನಾಳದ ಕ್ಯಾನ್ಸರ್, ಶ್ವಾಸನಾಳವನ್ನು ಮುಚ್ಚುವುದರ ಮೂಲಕ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಈ ಶಸ್ತ್ರಚಿಕಿತ್ಸೆಯು ರೋಗಿಯ ಜೀವ ಉಳಿಸುವ ಮತ್ತು ಕ್ಯಾನ್ಸರ್ ಗುಣಪಡಿಸುವ ವಿಧಾನವಾಗಿದೆ.
ಮಣಿಪಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಇತ್ತೀಚೆಗೆ 70 ವರ್ಷದ ರೋಗಿ ಸೇರಿದಂತೆ, ಇಂತಹ 4 ಕ್ಯಾನ್ಸರ್ ರೋಗಿಗಳಿಗೆ ಪ್ರಮುಖ ಟ್ರಾಕಿಯೊಬ್ರಾಂಕಿಯಲ್ (ಶ್ವಾಸನಾಳ ) ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಪ್ರಸ್ತುತ ಈ ರೋಗಿಯು 9 ತಿಂಗಳಿಂದ ಆರೋಗ್ಯವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಾಕ ಡಾ. ನವೀನ ಕುಮಾರ್ ಹೇಳಿದರು.
ಇತ್ತೀಚೆಗೆ ಎದೆಯೊಳಗಿನ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗೆಡ್ಡೆಗೆ 2 ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಕ್ಯಾನ್ಸರ್ ಗೆಡ್ಡೆಯಿಂದ ಹೃದಯ, ಪ್ರಮುಖ ರಕ್ತನಾಳಗಳು, ಶ್ವಾಸಕೋಶ ಮತ್ತು ಶ್ವಾಸ ನಾಳವು ಸಂಕುಚಿತವಾಗಿದ್ದವು. ಇದರಲ್ಲಿ, ಒಬ್ಬ 15 ವರ್ಷದ ಬಾಲಕನಿಗೆ 3 ಕೆಜಿಯಷ್ಟು ತೂಕದ ಗೆಡ್ಡೆ ಇಡೀ ಎದೆಯ ಮೂಳೆ (ಸ್ಟರ್ನಮ್) ಮತ್ತು ಎದೆಯ ಎಡಭಾಗವನ್ನು ಒಳಗೊಂಡಿತ್ತು. 10 ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣ ಗೆಡ್ಡೆಯನ್ನು ತೆಗೆದುಹಾಕಲಾಯಿತು ಮತ್ತು ಎದೆಯ ಮೂಳೆಯನ್ನು ಕೃತಕ ಮೂಳೆಯೊಂದಿಗೆ ಪುನರ್ ನಿರ್ಮಿಸಲಾಯಿತು. ಪ್ರಸ್ತುತ ಈತ ಕಳೆದ 5 ತಿಂಗಳಿಂದ ನಿಯಮಿತ ವಾಗಿ ವೈದ್ಯರನ್ನು ಸಂದರ್ಶಿಸುತ್ತಿದ್ದು, ಆರೋಗ್ಯವಾಗಿದ್ದಾನೆ. ಮತ್ತೊಂದು 15 ವರ್ಷದ ಬಾಲಕಿಗೆ ಕುತ್ತಿಗೆಯನ್ನು ಒಳಗೊಂಡ ದೊಡ್ಡ ರಕ್ತಸ್ರಾವದ ಗೆಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇಲ್ಲಿ 14 ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆಯ ಮೂಲಕ 5 ಕೆಜಿ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು ಮತ್ತು ಪ್ಲಾಸ್ಟಿಕ್ ಸರ್ಜರಿಯಿಂದ ಕುತ್ತಿಗೆಯನ್ನು ಪುನರ್ ನಿರ್ಮಿಸಲಾಯಿತು. ಅವರು ಕೂಡ ಆರೋಗ್ಯವಾಗಿದ್ದಾರೆ.
ಸಂಕೀರ್ಣವಾದ ಕಾಲು ಉಳಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಮೂಳೆಯ ಕ್ಯಾನ್ಸರ್ ಗೆ ನಡೆಸುತ್ತಿದ್ದು, 3 ವರ್ಷದ ಬಾಲಕಿಗೆ ತೊಡೆಯ ಮೂಳೆಯ ಕ್ಯಾನ್ಸರ್ ಗಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು 50 ವರ್ಷದ ಮಹಿಳೆಗೆ ಸ್ಯಾಕ್ರೊ-ಇಲಿಯಾಕ್ ಜಂಟಿ (ಬೆನ್ನು ಮತ್ತು ತೊಡೆಯೊಂದಿಗೆ ಸೇರಿಕೊಳ್ಳುವುದು) ಒಳಗೊಂಡ ಶ್ರೋಣಿಯ ಮೂಳೆಯ ಕ್ಯಾನ್ಸರ್ ಗಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು, ಅಲ್ಲಿ ಮುಖ್ಯ ಸ್ಯಾಕ್ರೊ-ಇಲಿಯಾಕ್ ಜಂಟಿ (ಆಂತರಿಕ ಹೆಮಿಪೆಲ್ವೆಕ್ಟಮಿ ಟೈಪ್ 4) ಜೊತೆಗೆ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಒಂದೂವರೆ ವರ್ಷಗಳಿಂದ ರೋಗಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ನವೀನ ಕುಮಾರ್ ಎ.ಎನ್ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿದ್ದು ಡಾ.ನವಾಜ್ ಉಸ್ಮಾನ್, ಡಾ. ಕೇಶವ ರಾಜನ್ ಮತ್ತು ಡಾ. ಪ್ರೀತಿ ಶೆಟ್ಟಿ ಈ ನುರಿತ ತಂಡದಲ್ಲಿದ್ದಾರೆ.
ಕಿಷ್ಟಕರ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರುವ ನುರಿತ ಮತ್ತು ತಜ್ಞ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಂಡವನ್ನು ಉಪವೈದ್ಯಕೀಯ ಅಧೀಕ್ಷಕರಾದ ಡಾ ಪದ್ಮರಾಜ ಹೆಗ್ಡೆ ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಕಾರ್ತಿಕ್ ಉಡುಪ, ಡಾ. ಸುಮಿತ್ ಮಾಲಾಪುರೆ, ಡಾ. ವಾಸುದೇವ ಭಟ್, ಡಾ. ನವಾಜ್ ಉಸ್ಮಾನ್, ಡಾ ಕೇಶವರಾಜನ್, ಸುಧಾಕರ್ ಪ್ರಭು ಇದ್ದರು.