ಮಣಿಪಾಲ: ಇಲ್ಲಿನ ಮಂಚಿ ರಾಜೀವನಗರದ ಗಣೇಶ್ ಆಚಾರ್ಯ ಎಂಬುವವರ ಮನೆಯ ಸಮೀಪ ಮಂಗಳವಾರ ರಾತ್ರಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಅದನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಗಣೇಶ್ ಅವರ ಮನೆಯ ಬೇಲಿಯಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಕೂಡಲೇ ಮನೆಯವರು ಉರಗ ತಜ್ಞ ಸುಧೀರ್ ರಾಜೀವನಗರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸುಧೀರ್, ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ದೂರದ ಕಾಡಿಗೆ ಬಿಟ್ಟರು. ಇವರಿಗೆ ಸ್ಥಳೀಯರಾದ ಶಿವಪ್ರಸಾದ್ ರಾಜೀವನಗರ, ಗಣೇಶ್ ಆಚಾರ್ಯ, ವಿಶಾಲ್ ರಾಜೀವನಗರ ಸಹಾಯ ಮಾಡಿದರು. ಉರಗ ತಜ್ಞ ಸುಧೀರ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.