ಉಡುಪಿ: ಹಣ್ಣುಗಳ ರಾಜನೆಂದೇ ಹೆಸರುವಾಸಿಯಾದ, ಕಿರಿಯರಿಂದ ಹಿಡಿದು ಹಿರಿಯರವರೆಗೂ ಬಾಯಲ್ಲಿ
ನಿರೂರಿಸುವ ವಿವಿಧ ಬಗೆಯ ಮಾವಿನ ಹಣ್ಣಿನ ಮೇಳವನ್ನು ಉಡುಪಿ ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವುದು, ಸಾರ್ವಜನಿಕರಿಗೆ ವಿವಿಧ ಮಾವಿನ ತಳಿಗಳನ್ನು ಪರಿಚಯಿಸುವುದು, ಹವಾಮಾನ ವೈಪರೀತ್ಯದಿಂದಾಗಿ ಮಾವು ಇಳುವರಿ ನಷ್ಟದಲ್ಲಿರುವ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿ. ಪಂ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ, ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 21ರಿಂದ 23ರವರೆಗೆ ಆಯೋಜಿಸಲಾಗಿದೆ.
20ಕ್ಕೂ ಅಧಿಕ ಮಳಿಗೆಗಳನ್ನು ಮೇಳದಲ್ಲಿ ತೆರೆಯಲಾಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್ಸ್ ಸಹಿತ ನಾನ ತಳಿಯ ಒಟ್ಟು 30 ಟನ್ ಮಾವು ಮೇಳದಲ್ಲಿ ಲಭ್ಯವಿದೆ. ಮಾವು ಮೇಳದಲ್ಲಿ ಸಕ್ಕರೆಗುತ್ತಿ ಮಾವು ವಿಶೇಷ ಆಕರ್ಷಣೆಯಾಗಿದ್ದು, ಕೆಜಿಗೆ 200ರೂ ದರದಲ್ಲಿ ಮಾರಾಟವಾಗುತ್ತಿದೆ.
ಮೊದಲ ಭಾರಿಗೆ ನಡೆದ ಮಾವು ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೇಳದ ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸಿ ವಿವಿಧ ಹಣ್ಣುಗಳ ರುಚಿ ಸವಿದು, ಖರೀದಿ ಮಾಡಿದರು. ಕಡಿಮೆ ಬೆಲೆಗೆ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳು ಎಲ್ಲರ ಮನ ಗೆಲ್ಲುತ್ತಿದೆ.