ಮಂಗಳೂರು: ಜೈಲು ಅಡುಗೆಮನೆಯ ಗೇಟಿಗೆ ಬೀಗ ಹಾಕಿದ ಬಳಿಕ ಕೈದಿಯೊಬ್ಬ ಗ್ಯಾಸ್ ಸಿಲಿಂಡರ್ ಹಿಡಿದು ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯುವಂತೆ ಬೆದರಿಕೆ ಹಾಕಿದ ಘಟನೆ ಮಂಗಳೂರು ಜೈಲಿನಲ್ಲಿ ನಡೆದಿದೆ.
ಫೈಜಲ್ ಎಂಬಾತ ಗ್ಯಾಸ್ ಸಿಲಿಂಡರ್ನಿಂದ ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಇತರ ಕೈದಿಗಳನ್ನು ಪ್ರಚೋದಿಸಿ, ಬೀಡಿಗಳನ್ನು ನೀಡುವವರೆಗೆ ಸೆಲ್ಗಳಿಗೆ ಹಿಂತಿರುಗದಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಜೈಲಿನಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.















