ಮಂಗಳೂರು: ಇಂದಿನಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ

ಮಂಗಳೂರು: ಮೀನುಗಳ ಸಂತಾನೋತ್ಪತ್ತಿ ಹಾಗೂ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರವು ಇಂದಿನಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿದೆ. ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಅವಕಾಶವಿರುವುದಿಲ್ಲ.

ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಪ್ರಮುಖ ಕಾಲವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಯಾಂತ್ರಿಕ ದೋಣಿಗಳ ಸಂಚಾರವು ಮೀನುಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳ ಕಾಲ ಮೀನುಗಾರಿಕೆ ಚಟುವಟಿಕೆಗಳು ಬಹುತೇಕ ಸ್ಥಗಿತಗೊಳ್ಳಲಿವೆ.

ಆದರೆ ನಾಡದೋಣಿ ಹಾಗೂ ಸಾಂಪ್ರದಾಯಿಕ ಬಲೆಗಳನ್ನು ಬಳಸುವ ಮೀನುಗಾರರಿಗೆ ಮೀನುಗಾರಿಕೆ ಮುಂದುವರಿಸಲು ಅವಕಾಶ ನೀಡಲಾಗಿದೆ. 10 ಅಶ್ವಶಕ್ತಿಯವರೆಗೆ ಇರುವ ಇಂಜಿನ್‌ಗಳನ್ನು ಬಳಸಿ ಸಮುದ್ರ ತೀರ ಹಾಗೂ ನದಿ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಬಹುದಾಗಿದೆ.

ಈ ನಡುವೆ ಕಳೆದ ವರ್ಷಕ್ಕೆ ಹೋಲಿಸಿದರೆ 2025-26ರಲ್ಲಿ ಮೀನು ಉತ್ಪಾದನೆ ಉತ್ತಮ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದು, ಮೂರು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮೀನುಗಾರಿಕೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಮಂಗಳೂರು ಮೀನುಗಾರಿಕಾ ದಕ್ಕೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಬೋಟ್‌ಗಳ ಲಂಗರು ವ್ಯವಸ್ಥೆ ಸವಾಲಾಗಿದ್ದು, 1,400 ಮೀಟರ್ ಉದ್ದದ ದಕ್ಕೆಯಲ್ಲಿ ಪ್ರಸ್ತುತ ಕೇವಲ 250 ಮೀಟರ್ ಪ್ರದೇಶ ಮಾತ್ರ ಬಳಕೆಗೆ ಲಭ್ಯವಿದೆ.