ಮಂಗಳೂರು: ಕೇರಳದ ಉದ್ಯಮಿಯ ಕಾರು ಅಡ್ಡಗಟ್ಟಿ ಪತ್ನಿ-ಮಗನ ಅಪಹರಣ; 180 ಗ್ರಾಂ ಚಿನ್ನ ದರೋಡೆ

ಈ ಚಿತ್ರ ಘಟನೆಯನ್ನು ಸೂಚಿಸು ಚಿತ್ರವಷ್ಟೇ.ನಿಜವಾದ ಘಟನೆಯ ಚಿತ್ರಲ್ಲ

(ಇಲ್ಲಿ ಬಳಸಿದ ಚಿತ್ರ ಘಟನೆಯನ್ನು ಸೂಚಿಸುವ ಚಿತ್ರವಷ್ಟೇ.ನಿಜವಾದ ಘಟನೆಯ ಚಿತ್ರವಲ್ಲ)

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಕೇರಳದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿ, 180 ಗ್ರಾಂ ಚಿನ್ನಾಭರಣ ಹಾಗೂ ಕಾರನ್ನು ದೋಚಿ ಪರಾರಿಯಾದ ಘಟನೆ ಭಾನುವಾರ ಮುಂಜಾನೆ ಬೈಕಂಪಾಡಿಯಲ್ಲಿ ನಡೆದಿದೆ.

ದರೋಡೆಗೊಳಗಾದವರನ್ನು ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಭರಣ ಮಳಿಗೆ ನಡೆಸುತ್ತಿರುವ ವಿಕಾಸ್ ಎಂದು ಗುರುತಿಸಲಾಗಿದೆ. ಅವರು ಪತ್ನಿ ಮತ್ತು ಮಗನೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಸಾಂಗ್ಲಿಯಿಂದ ಪಯ್ಯನ್ನೂರಿಗೆ ಪ್ರಯಾಣಿಸುತ್ತಿದ್ದರು.

ಭಾನುವಾರ ಮುಂಜಾನೆ ಸುಮಾರು 2.15ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜಂಕ್ಷನ್ ಸಮೀಪದ ದ್ವಾರಾ ಹೋಟೆಲ್ ಬಳಿ ತಲುಪುತ್ತಿದ್ದಂತೆ, ಇನ್ನೋವಾ ಕಾರಿನಲ್ಲಿ ಬಂದ ಏಳು ಮಂದಿ ದುಷ್ಕರ್ಮಿಗಳು ವಿಕಾಸ್ ಅವರ ಕಾರಿಗೆ ಅಡ್ಡಗಟ್ಟಿದ್ದಾರೆ. ಬಳಿಕ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ, ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಮಗನೊಂದಿಗೆ ವಾಹನವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳು ಪಣಂಬೂರು ಬೀಚ್ ರಸ್ತೆಯತ್ತ ತೆರಳಿ, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ. ಆದರೆ ಮಹಿಳೆ ಧರಿಸಿದ್ದ ಚಿನ್ನದ ಸರವನ್ನು ಮುಟ್ಟದೇ ಬಿಟ್ಟಿದ್ದಾರೆ. ಬಳಿಕ ತಾಯಿ ಮತ್ತು ಮಗನನ್ನು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ಬಿಟ್ಟು, ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಆರೋಪಿಗಳ ಪತ್ತೆ ಹಾಗೂ ಕಳುವಾದ ಕಾರು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮುಂದುವರಿಸಲಾಗಿದೆ.