ಮಂಗಳೂರು: ಕೆಡಿಪಿ ಸಭೆಯಲ್ಲಿ ಭ್ರಷ್ಟಾಚಾರ ಆರೋಪದ ಸದ್ದು,ಸಚಿವ ಯು.ಟಿ.ಖಾದರ್-ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ

ಮಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಡಿಎಲ್) ಅಧಿಕಾರಿಗಳ ವಿರುದ್ಧ ಪುತ್ತೂರು ಶಾಸಕ ಅಶೋಕ್ ರೈ ಮಾಡಿರುವ ಭ್ರಷ್ಟಾಚಾರ ಆರೋಪ ದಕ್ಷಿಣ ಕನ್ನಡ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ಆರೋಪದ ಕುರಿತು ಕೈಗೊಂಡಿರುವ ಕ್ರಮ ಹಾಗೂ ತನಿಖೆಯ ಪ್ರಗತಿ ಬಗ್ಗೆ ಬಿಜೆಪಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಪ್ರಶ್ನಿಸಿದರು. ಈ ವೇಳೆ ಸಚಿವರು ಹಾಗೂ ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆದು ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಶಾಸಕ ಭರತ್ ಶೆಟ್ಟಿ ಅವರು ಭ್ರಷ್ಟಾಚಾರದ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, ಜಿಲ್ಲೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸೋಣ, ‘ಮಕ್ಕಳಾಟಿಕೆ ಮಾಡಬೇಡಿ’ ಎಂದು ತಾಕೀತು ಮಾಡಿದರು. ಸಚಿವರ ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಸ್ಪಷ್ಟನೆ ನೀಡಿದ ಖಾದರ್, ಈ ವಿಚಾರದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಯಾರೊಬ್ಬರ ಹೇಳಿಕೆ ಅಥವಾ ಆರೋಪದ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಿಚಾರಣೆ ನಡೆಸಿ ಸತ್ಯಾಂಶ ಹೊರಬರಬೇಕು ಎಂದರು.

ಶಾಸಕರ ಆರೋಪ ಸರಿಯೋ ಅಥವಾ ಅಧಿಕಾರಿಗಳ ಹೇಳಿಕೆ ಸರಿಯೋ ಎಂಬುದು ತನಿಖೆಯಿಂದ ನಿರ್ಧಾರವಾಗಲಿದೆ. ಅಲ್ಲದೆ, ಕೆಆರ್‌ಡಿಎಲ್‌ಗೆ ಇಲ್ಲಿಯವರೆಗೆ ಯಾವುದೇ ಕಾಮಗಾರಿಯನ್ನು ನೇರವಾಗಿ ನೀಡಿಲ್ಲ ಎಂದು ಖಾದರ್ ಸ್ಪಷ್ಟಪಡಿಸಿದರು.

ಇದೇ ವೇಳೆ, ಅಶೋಕ್ ರೈ ಮಾಡಿರುವ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತನಿಖೆಯ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು. ಸಭೆಯಲ್ಲಿ ಬಿಜೆಪಿ ಶಾಸಕರು ಹಾಗೂ ಎಂಎಲ್‌ಸಿ ಐವನ್ ಡಿಸೋಜಾ ನಡುವೆ ಮಾತಿನ ಚಕಮಕಿಯೂ ನಡೆದಿದ್ದು, ಕೆಲಕಾಲ ವಾತಾವರಣ ಉದ್ವಿಗ್ನಗೊಂಡಿತ್ತು.