ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಹ್ಯಾಂಡ್ ಬಾಲ್ ಟೂರ್ನ್ ಮೆಂಟ್: ಸೈಂಟ್ ಅಲೋಶಿಯಸ್, ಎಸ್ ಡಿಎಂ ಕಾಲೇಜಿನ ತಂಡಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಪಿಪಿಸಿ ಮೈದಾನದಲ್ಲಿ ನಡೆದ ಎರಡು ದಿನಗಳ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಕೂಟದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಮಹಿಳಾ ತಂಡ ಹಾಗೂ ಉಜಿರೆ ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಪ್ರಥಮ ಬಹುಮಾನ ಗೆದ್ದುಗೊಂಡಿವೆ.
ಫೈನಲ್ ಪಂದ್ಯದಲ್ಲಿ ಅಲೋಶಿಯಸ್ ಕಾಲೇಜಿನ ಮಹಿಳಾ ತಂಡ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತಂಡವನ್ನು14-09 ಅಂಕಗಳ ಅಂತರದಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತಂಡವನ್ನು 27-23 ಅಂತರದಿಂದ ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ಬೆಸ್ಟ್ ಗೋಲ್‌ಕೀಪರ್ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಶಾಂಭವಿ, ಆಲ್‌ರೌಂಡರ್ ಆಳ್ವಾಸ್‌ನ ರೂಸ್ಲಿ, ಬೆಸ್ಟ್ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿಯನ್ನು ಅಲೋಸಿಯಸ್‌ನ ತ್ರಿಮಲ್ ಮತ್ತು ಪುರುಷರ ವಿಭಾಗದಲ್ಲಿ ಬೆಸ್ಟ್ ಗೋಲ್‌ಕೀಪರ್ ಆಳ್ವಾಸ್‌ನ ಕಿರಣ್, ಆಲ್ ರೌಂಡರ್ ಮಂಗಳೂರು ವಿವಿ ಕ್ಯಾಂಪಸ್‌ನ ಸದ್ದಾಂ ಹುಸೇನ್, ಬೆಸ್ಟ್ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿಯನ್ನು ಉಜಿರೆ ಎಸ್‌ಡಿಎಂನ ನಿತೀನ್ ತನ್ನದಾಗಿಸಿಕೊಂಡರು.
ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ, ಸೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದರು.
ಕ್ರೀಡೆಗಳಲ್ಲಿ ಸೋಲು-ಗೆಲುವು ಎನ್ನುವುದು ಎರಡು ತಂಡಕ್ಕೂ ಏಕಕಾಲದಲ್ಲಿ ಸಿಗುವುದಿಲ್ಲ. ಆದರೆ  ದೈಹಿಕ ಆರೋಗ್ಯ ಎರಡು ತಂಡಗಳ ಆಟಗಾರರಿಗೂ ಲಭಿಸುತ್ತದೆ. ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಿದಾಗ ಮಾತ್ರ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್,  ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ. ಸಿ.ಕೆ. ಕಿಶೋರ್ ಕುಮಾರ್ ಉಪಸ್ಥಿತರಿದ್ದರು.