ಮಂಗಳೂರು: ವಿವಿಧೆಡೆ ಅನಧಿಕೃತ ಅಂಗಡಿಗಳ ತೆರವು

ಮಂಗಳೂರು: ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ರಸ್ತೆಯ ಕಬಕದಲ್ಲಿ ನಡೆಯಿತು.
ಅನಧಿಕೃತ ಅಂಗಡಿಗಳ ತೆರವು ಕುರಿತು ಗ್ರಾಮ ಪಂಚಾಯತ್ ಈ ಹಿಂದೆ ನೋಟೀಸ್ ನೀಡಿತ್ತು. ಆದರೆ ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿತ್ತು. ಕೋರ್ಟ್ ಆದೇಶದಂತೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.
ಪುತ್ತೂರು ತಹಶೀಲ್ದಾರ್‌ ರ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿಯಿಂದ ಅಂಗಡಿಗಳ ತೆರವು ಕಾರ್ಯಾಚರಣೆ ಬೆಳಿಗ್ಗೆ ಗಂಟೆ ಆರಕ್ಕೆ ನಡೆಯಿತು. ಸುಮಾರು 12 ಅಂಗಡಿಗಳನ್ನು ತೆರವು ಮಾಡಲಾಯಿತು. ಅಂಗಡಿ ತೆರವಿಗೆ ಸಂಬಂಧಿಸಿ ಬಂದಿರುವ ನೋಟೀಸ್ ಮೇಲೆ ಅಂಗಡಿ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದರು.
ಹೈಕೋರ್ಟ್ ಅಂಗಡಿಗಳ ತೆರವಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ಆದೇಶ ಪತ್ರವನ್ನು ಈ ಹಿಂದೆಯೂ ನೀಡಲಾಗಿದ್ದು, ಇದೀಗ ಇಂದು ಬೆಳಿಗ್ಗೆ ಅಂಗಡಿಗಳ ತೆರವು ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಲೀಕರು ಮತ್ತೊಮ್ಮೆ ನೀಡಿದ್ದಾರೆ. ಇದೀಗ ತಡೆಯಾಜ್ಞೆ ನೋಟೀಸ್ ನೀಡುವ ವೇಳೆ ಬಹುತೇಕ ಅಂಗಡಿಗಳ ತೆರವು ಆಗಿತ್ತು.