ಮಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ.ಕ 2018-19ನೇ ಸಾಲಿನಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರಮಶಕ್ತಿ ಮತ್ತು ಸ್ವಯಂ ಉದ್ಯೋಗ ಯೋಜನೆಗಳಲ್ಲಿ ವಿವಿಧ ಚಟುವಟಿಕೆ, ವ್ಯಾಪಾರಾಭಿವೃದ್ಧಿಗಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸಹಾಯಧನ ಮೊತ್ತ ಬಿಡುಗಡೆಯಾಗಿದ್ದು, ಇದರ ಚೆಕ್ ಗಳನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಮಂಗಳವಾರ ವಿತರಿಸಿದರು.
ಶ್ರಮಶಕ್ತಿ ಯೋಜನೆಯಲ್ಲಿ 78 ಮತ್ತು ಸ್ವಯಂ ಉದ್ಯೋಗ ಯೋಜನೆಯಲ್ಲಿ 10 ಫಲಾನುಭವಿಗಳಿದ್ದು, ಒಟ್ಟು 88 ಜನ ಫಲಾನುಭವಿಗಳಿಗೆ 33.36 ಲಕ್ಷದ ಚೆಕ್ ಗಳನ್ನು ಶಾಸಕರ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾ ಪ್ರಮುಖರಾದ ಮೊಹಮ್ಮದ್ ಸಫ್ವಾನ್, ಬಿಜೆಪಿ ಮುಖಂಡರಾದ ವಿನಯ್ ಎಲ್. ಶೆಟ್ಟಿ, ರವಿಚಂದ್ರ, ಅಜೀಜ್ ಬೈಕಂಪಾಡಿ, ಸಲೀಮ್ ಬೆಂಗ್ರೆ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.