ಮಂಗಳೂರು: ಕಾಲು ಕಟ್ಟಿ ತಲೆಕೆಳಗೆ ತೂಗು ಹಾಕಿ ಮೀನುಗಾರನಿಗೆ ಚಿತ್ರಹಿಂಸೆ; ಆರು ಮಂದಿಯ ಬಂಧನ
ಮಂಗಳೂರು: ಮೊಬೈಲ್ ಕಳವು ಮಾಡಿದ್ದಾನೆಂದು ಆರೋಪಿ ಮೀನುಗಾರನೋರ್ವನನ್ನು ಬೋಟ್‌ನ ಕ್ರೇನ್‌ಗೆ ಕಾಲು ಕಟ್ಟಿ ತಲೆಕೆಳಗೆ ತೂಗು ಹಾಕಿ ಸಹ ಮೀನುಗಾರ ಕಾರ್ಮಿಕರು ದೌರ್ಜನ್ಯ ಎಸಗಿರುವ ಘಟನೆ ಮಂಗಳೂರು ಹಳೆಯ ಬಂದರು ದಕ್ಕೆಯಲ್ಲಿ ನಡೆದಿದೆ.
ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶದ ಬೆಸ್ತ ಸಮುದಾಯದ ವೈಲ ಶೀನು ಎಂದು ಗುರುತಿಸಲಾಗಿದೆ. ಈತನನ್ನು ಇತರ ಮೀನುಗಾರ ಕಾರ್ಮಿಕರು ಬೋಟ್‌ನ ಕ್ರೇನ್‌ಗೆ ಕಾಲು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಿಂಸಿಸುತ್ತಿರುವ ಹಾಗೂ ಹೊಡೆಯುವಂತೆ ಪ್ರೇರೇಪಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರು ಮಂದಿಯ ಬಂಧನ:
ಮೀನುಗಾರ ಕಾರ್ಮಿಕನನ್ನು ಕಾಲು ಕಟ್ಟಿ ತಲೆಕೆಳಗೆ ತೂಗು ಹಾಕಿದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗರಿ ಮನೋಹರ್ (21), ವುಟುಕೋರಿ ಜಾಲಯ್ಯ (30), ಕರ್ಪಿಂಗಾರಿ ರವಿ (27) ಮತ್ತು ಪ್ರಳಯ ಕಾವೇರಿ ಗೋವಿಂದಯ್ಯ (47) ಬಂಧಿತ ಆರೋಪಿಗಳು. ಎಲ್ಲರೂ ಆಂಧ್ರಪ್ರದೇಶ ಮೂಲದ ಮೀನುಗಾರರಾಗಿದ್ದಾರೆ ಎಂದು ತಿಳಿದುಬಂದಿದೆ.