ಮಂಗಳೂರು: ತರಕಾರಿ-ದಿನಸಿ ಖರೀದಿಗೆ ಮುಗಿಬಿದ್ದ ಜನತೆ

ಮಂಗಳೂರು: ಕಳೆದ ಮೂರು ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ದಿನಸಿ ಸಾಮಾಗ್ರಿಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3ಗಂಟೆಯ ವರೆಗೆ ಅವಕಾಶ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಜನತೆ ಹೊರ ಬಂದು ದಿನಸಿ, ತರಕಾರಿ ಖರೀದಿಸಿದ್ದಾರೆ.
ವಿವಿಧ ಭಾಗಗಳ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯೂ ನಿಂತು ಖರೀದಿ ಮಾಡುತ್ತಿದ್ದರು. ಮಾರುಕಟ್ಟೆ ಬಳಿ ಕ್ಯೂ ಗಾಗಿ ಚೇರ್ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮಾಡಿಕೊಟ್ಟಿತ್ತು. ಆದ್ರೆ ಒಂದೇ ಚೇರ್ ನ್ನು ಎಲ್ಲರು ಬಳಸೋದ್ರಿಂದ ಸೋಂಕು ಹರಡಬಹುದು ಅಂತ ಕೆಲ ಜನರು ಆಕ್ಷೇಪ ವ್ಯಕ್ತಪಡಿಸಿ, ಚೇರ್ ನಲ್ಲಿ ಕೂರದೆ ಪಕ್ಕದ ಸಾಲಿನಲ್ಲಿ ನಿಲ್ಲುತ್ತಿದ್ದರು.
ಇನ್ನೂ ಮಂಗಳೂರಿನಲ್ಲಿ ಮೀನುಗಾರಿಕೆ ಬಂದ್ ಆದ್ರಿಂದ ಮೀನು ಸಿಗುತ್ತಿಲ್ಲ. ಮತ್ತೊಂದು ಕಡೆ ಕಳೆದ ಮೂರು ದಿನಗಳಿಂದ ಮಾಂಸ ಸಿಗದೇ ಇದ್ದ ಕಾರಣ ನಗರದ ಕದ್ರಿ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಹೆಚ್ಚಿನ ಸಂಖ್ಯೆಯ ಜನರು ಖರೀದಿ ಮಾಡುತ್ತಿರುವುದು ಕಂಡುಬಂತು.
ಟ್ರಾಫಿಕ್ ಜಾಮ್:
ಮೂರು ದಿನಗಳಿಂದ ಬಂದ್ ಇದ್ದ ಕಾರಣ ಇಂದು ಸಾಕಷ್ಟು ಸಂಖ್ಯೆಯಲ್ಲಿ ನಗರಕ್ಕೆ ಜನತೆ ಆಗನಿಸಿದ್ದು, ಇದರಿಂದಾಗಿ ಕೆಲವು ಭಾಗದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯೂ‌ ಕಂಡು ಬಂದಿದೆ.