ಸುಳ್ಳು ಸುದ್ದಿ ಫಾರ್ವರ್ಡ್ ಮಾಡಿದರೆ ಕ್ರಿಮಿನಲ್ ‌ಮೊಕದ್ದಮೆ: ಪೊಲೀಸ್ ಆಯುಕ್ತರಿಂದ ಎಚ್ಚರಿಕೆ

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಫಾರ್ವರ್ಡ್ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರ ಸಾರ್ವಜನಿಕ ಅಧಿಕಾರಿಗಳ ಹೆಸರಿನಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು, ವದಂತಿಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಫಾರ್ವರ್ಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪ್ರಕರಣವೊಂದಕ್ಕೆ ಸಂಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಎಚ್ಚರಿಕೆ ನೀಡಿದ್ದಾರೆ.
ಅಧಿಕೃತವಾಗಿ ಅಧಿಕಾರಿಗಳಿಂದ ನೀಡಲಾದ ಸುದ್ದಿಗಳನ್ನಷ್ಟೇ ಜನರು ನಂಬಬೇಕು. ಅಧಿಕೃತರಿಂದ ಸಹಿ ಮಾಡಲಾದ ಪತ್ರಿಕಾ ಪ್ರಕಟನೆ ಅಥವಾ ಟ್ವಿಟರ್ ಮೂಲಕ ನೀಡಲಾದ ಹೇಳಿಕೆಗಳನ್ನು ಮಾತ್ರವೇ ಜನರು ಪರಿಗಣಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.