ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಶೀಘ್ರವೇ ಸರಿಪಡಿಸಲಾಗುವುದು: ಶಾಸಕ ಕಾಮತ್

ಮಂಗಳೂರು: ಪ್ರಾಪರ್ಟಿ ಕಾರ್ಡಿನಿಂದ ಉಂಟಾದ ಅವ್ಯವಸ್ಥೆಯನ್ನು ಶೀಘ್ರವೇ ಸರಿಪಡಿಸಲಾಗುವುದೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಪ್ರಾಪರ್ಟಿ ಕಾರ್ಡನ್ನು ಜಾರಿಗೆ ತರುವಾಗ ಸಮರ್ಪಕವಾದ ನಿಯಮಗಳನ್ನು ತರದ ಕಾರಣ ಹಾಗೂ ತಾಂತ್ರಿಕ ದೋಷಗಳಿಂದಾಗಿ ಸದ್ಯ ಪ್ರಾಪರ್ಟಿ ಕಾರ್ಡ್ ಎನ್ನುವುದು ಗೊಂದಲದ ಗೂಡಾಗಿದೆ.  ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರೊಂದಿಗೆ, ನಗರಾಭಿವೃದ್ಧಿ ಹಾಗೂ ಕಂದಾಯ ಸಚಿವರಾದ ಆರ್.ಅಶೋಕ್ ಅವರಲ್ಲಿ ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಸರಿಪಡಿಸಲು ಕೇಳಿಕೊಂಡಿದ್ದೇನೆ.
ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರು, ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡನ್ನು ನೋಂದಾವಣೆ ಮಾಡಲು ಜೋಡಿಸಿರುವ ಕ್ರಮವನ್ನು ಮುಂದಿನ 6 ತಿಂಗಳ ಮಟ್ಟಿಗೆ ತೆಗೆದು  ಹಾಕಲಾಗುವುದು. ಹಾಗೂ ಅಲ್ಲಿಯವರೆಗೆ ರಿಜಿಸ್ಟ್ರೇಷನ್ ಮಾಡಲು ಪ್ರಾಪರ್ಟಿ ಕಾರ್ಡಿನ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಕೇವಲ ಆದೇಶ ನೀಡುವುದಷ್ಟೇ ಬಾಕಿಯಿದೆ, ಶೀಘ್ರವೇ ಆದೇಶ ಬರುವ ನಿರೀಕ್ಷೆ ಇದೆ. ಹಾಗಾಗಿ ಸದ್ಯ ಪ್ರಾಪರ್ಟಿ ಕಾರ್ಡಿನ ಗೊಂದಲಗಳು ನಿವಾರಣೆಯಾದಂತಾಗುತ್ತದೆ ಎಂದು ತಿಳಿಸಿದ್ದಾರೆ.