ಮಂಗಳೂರು: 9 ವರ್ಷದ ಬಾಲಕ ಸಹಿತ ಕಾರನ್ನು ಹೊತ್ತೊಯ್ದ ಸಂಚಾರಿ ಪೊಲೀಸರು.!

ಮಂಗಳೂರು: 9 ವರ್ಷದ ಬಾಲಕ ಸಹಿತ ಕಾರನ್ನು ಎತ್ತುಕೊಂಡು ಹೋದ (ಟೋಯಿಂಗ್ ) ಘಟನೆ ಮಂಗಳೂರು ನಗರದಲ್ಲಿ ಗುರುವಾರ ನಡೆದಿದೆ.

ಮಿಜಾರಿನ ದಿವ್ಯಾ ಅವರ 9 ವರ್ಷದ ಮಗ ಪ್ರಖ್ಯಾತ್ ಹಾಗೂ ಕಾರನ್ನು ಸಂಚಾರಿ ಪೊಲೀಸರು‌ ಟೋಯಿಂಗ್ ಮಾಡಿದ್ದರು. ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು.

ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ ಪ್ರಖ್ಯಾತ್‌ ಕಾರಿನಲ್ಲೇ ಇದ್ದರು. ದಿವ್ಯಾ ಅವರು ಮೊಬೈಲನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ದಿವ್ಯಾರಿಗೆ ನೀಡಲೆಂದು ತೆರಳಿದ್ದಾಗ ಪೊಲೀಸರು ಮಗುವಿನ ಸಹಿತ ಕ್ಷಣಮಾತ್ರದಲ್ಲಿ ಕಾರನ್ನು ಟೋಯಿಂಗ್‌ ಮಾಡಿದ್ದಾರೆ ಎನ್ನಲಾಗಿದೆ.

ಕಾರು ಹಾಗೂ ಮಗು ಇಲ್ಲದಿದ್ದನ್ನು ಕಂಡು ಗಾಬರಿಗೊಂಡ ಚಾಲಕ ಮತ್ತು ದಿವ್ಯಾ ಹಲವೆಡೆ ಮಗುವಿಗಾಗಿ ಹುಡುಕಾಡಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಒಂದು ಕಡೆ ಸಿಸಿ ಕೆಮರಾ ಪರಿಶೀಲಿಸಿದಾಗ ಕದ್ರಿ ಪೊಲೀಸರು ಟೋಯಿಂಗ್‌ ಮಾಡಿರುವುದು ಗೊತ್ತಾಗಿದೆ.

ಕಾರು ನೋ ಪಾರ್ಕಿಂಗ್‌ ಸ್ಥಳದಲ್ಲಿ ಇರಲಿಲ್ಲ. ಅದು ರಸ್ತೆ ಕೂಡ ಆಗಿರಲಿಲ್ಲ. ಮಗುವಿನ ತಾಯಿ ದಿವ್ಯಾ ಹೇಳಿದ್ದಾರೆ. ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರು ನೋ ಪಾರ್ಕಿಂಗ್ ನಲ್ಲಿ ಇರಲಿಲ್ಲ. ಹಾಗಾಗಿ ನಾನು ಫೈನ್ ಕಟ್ಟಲ್ಲ ಎಂದಿದ್ದಾರೆ. ಈ‌ ಬಗ್ಗೆ ಸಾರ್ವಜನಿಕ ವಲಯದಿಂದಲೂ ಭಾರಿ ಆಕ್ರೋಶ ವ್ಯಕ್ತವಾಗಿದೆ.