ಮಂಗಳೂರು: ವೈದ್ಯಕೀಯ ಲೋಕದ ಡಗ್ಸ್ ನಂಟಿನ ಕರಾಳ ಮುಖಗಳು ಬಯಲಾಗುತ್ತಲೇ ಮಂಗಳೂರಿಗರಲ್ಲಿ ಆತಂಕ ಮನೆಮಾಡಿದೆ. ಮಂಗಳೂರು ನಗರ ಠಾಣೆಯ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಿಬ್ಬಂದಿ ಜನವರಿ 10 ರಂದು ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿ 10 ಜನರನ್ನು ಬಂಧಿಸಿದ್ದರು. ಜನವರಿ 12 ರಂದು ಇನ್ನೂ 3 ಜನರನ್ನು ಬಂಧಿಸಿದ್ದರು. ಇದೀಗ ಮತ್ತಿಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಒಟ್ಟು 15 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ 13 ಮಂದಿ ವೈದ್ಯರೇ ಇರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸೆಂಬರ್ ಅಂತ್ಯ ಮತ್ತು ಜನವರಿ ತಿಂಗಳಿನಲ್ಲಿ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿರುವ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಸಿಸಿಬಿ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ಕಾರ್ಯಾಚರಣೆಯಲ್ಲಿ ಸುಮಾರು 10 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಎನ್.ಆರ್.ಪುರ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರು ಮತ್ತು ಆಂದ್ರಪ್ರದೇಶದಿಂದ ಗಾಂಜಾ ಖರೀದಿಸಿ ಕರಾವಳಿಯಲ್ಲಿ ದಂಧೆ ನಡೆಸಲಾಗುತ್ತಿದ್ದು, ಕಳೆದ 10 ದಿನದಲ್ಲಿ ಪೊಲೀಸರು 100 ಕೆಜಿ ಗಾಂಜಾ ವಶಪಡಿಸಿ 6 ಪ್ರಕರಣ ದಾಖಲಿಸಿ 20 ಕ್ಕೂ ಮಿಕ್ಕಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಇನ್ನೂ ಕೆಲವು ಶಂಕಿತರು ತಮ್ಮ ಅಪಾರ್ಟ್ಮೆಂಟ್ಗಳು, ಹಾಸ್ಟೆಲ್ ಕೊಠಡಿಗಳು ಮತ್ತು ಪೇಯಿಂಗ್ ಗೆಸ್ಟ್ ವಸತಿಗಳಿಂದ ಪರಾರಿಯಾಗಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ಪೇಯಿಂಗ್ ಗೆಸ್ಟ್ , ವಸತಿ ನಿಲಯಗಳನ್ನು ನಿರ್ವಹಿಸುವವರು ಮತ್ತು ತಮ್ಮ ಫ್ಲಾಟ್ಗಳನ್ನು ಬಾಡಿಗೆಗೆ ನೀಡುವವರು ತಮ್ಮ ಮನೆಯ ಆವರಣದಲ್ಲಿ ನಡೆಯುತ್ತಿರುವ ಘಟನೆಗಳ ಮೇಲೆ ನಿಗಾ ಇಡಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಜನವರಿ 7 ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಿಂದ ಭಾರತೀಯ ಮೂಲದ ಯುಕೆ ಪ್ರಜೆ ನೀಲ್ ಕಿಶೋರಿಲಾಲ್ ರಾಮ್ಜಿ ಶಾ (38) ಎಂಬಾತನನ್ನು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಮತ್ತು ಅವರ ತಂಡವು ಬಂಧಿಸುವುದರೊಂದಿಗೆ ಈ ದಂಧೆಯನ್ನು ಭೇದಿಸಲಾಯಿತು. ನೀಲ್ ಕಿಶೋರಿಲಾಲ್ ರಾಮ್ಜಿ ಶಾ ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ದಾಖಲಾಗಿದ್ದ. ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ವಿದ್ಯಾರ್ಥಿ ಮಾತ್ರವಲ್ಲ ವಿದ್ಯಾರ್ಥಿನಿಯರೂ ಕೂಡಾ ಡ್ರಗ್ಸ್ ನ ದಂಧೆಯಲ್ಲಿ ತೊಡಗಿಕೊಂಡಿರುವುದು ಆತಂಕಕಾರಿಯಾಗಿದೆ.