ಮಂಗಳೂರು: ಮನೆಯಿಂದಲೇ ಪಾರ್ಟ್ಟೈಮ್ ಕೆಲಸ ಮಾಡುವ ಮೂಲಕ ಹೆಚ್ಚಿನ ಹಣ ಗಳಿಸಬಹುದು ಎಂಬ ಆಮಿಷವೊಡ್ಡಿದ ಸೈಬರ್ ವಂಚಕರು, ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ 28 ವರ್ಷದ ಯುವಕನಿಗೆ ಬರೋಬ್ಬರಿ 4,49,000 ರೂ. ವಂಚಿಸಿದ್ದಾರೆ. ಈ ಸಂಬಂಧ ಮಂಗಳೂರು ನಗರದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸ್ವಂತ ಜಮೀನಿನಲ್ಲಿ ಕೃಷಿ ಹಾಗೂ ಹೈನುಗಾರಿಕೆ ನಡೆಸುತ್ತಿದ್ದ ಯುವಕ ಪಾರ್ಟ್ಟೈಮ್ ಕೆಲಸದ ಹುಡುಕಾಟದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗೂಗಲ್ ಮೂಲಕ ‘Shine.com’ ವೆಬ್ಸೈಟ್ನಲ್ಲಿ ತಮ್ಮ ರೆಸ್ಯೂಮ್ ಅಪ್ಲೋಡ್ ಮಾಡಿದ್ದರು. ಬಳಿಕ ನವೆಂಬರ್ 3ರಂದು ಅವರ ಮೊಬೈಲ್ ಸಂಖ್ಯೆಯನ್ನು ‘ap5t’ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಸಲಾಗಿತ್ತು.
ಈ ಗ್ರೂಪ್ ಮೂಲಕ ‘ನೇಹಾ ಶರ್ಮಾ’ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ತಾನು ‘iProspect India’ ಕಂಪನಿಯ ಉದ್ಯೋಗಿ ಎಂದು ಹೇಳಿಕೊಂಡಿದ್ದರು. ಮನೆಯಿಂದಲೇ ಕೆಲಸ ಮಾಡಿ ದಿನಕ್ಕೆ 50ರಿಂದ 200 ರೂ. ಗಳಿಸಬಹುದು ಎಂದು ಯುವಕನಿಗೆ ಆಮಿಷವೊಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
Flipkart Bonus Task ಹೆಸರಿನಲ್ಲಿ ವಂಚನೆ
ವಂಚಕರು ನೀಡಿದ ಆರಂಭಿಕ ಟಾಸ್ಕ್ಗಳನ್ನು ಪೂರ್ಣಗೊಳಿಸಿದ ಯುವಕನಿಗೆ ಸಣ್ಣ ಮೊತ್ತದ ಹಣ ಪಾವತಿಸಿ ನಂಬಿಕೆ ಗಳಿಸಿದ್ದರು. ಬಳಿಕ ನವೆಂಬರ್ 4ರಂದು ‘Flipkart Bonus Task’ ಹೆಸರಿನಲ್ಲಿ 1,000ರಿಂದ 18,000 ರೂ. ಹೂಡಿಕೆ ಮಾಡಿದರೆ 1,200 ರೂ. ಲಾಭಾಂಶ ನೀಡುವುದಾಗಿ ತಿಳಿಸಿದ್ದರು. ಆರಂಭದಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಿದಾಗ ಲಾಭಾಂಶವನ್ನೂ ಪಾವತಿಸಿದ್ದರು.
ಇದನ್ನು ನಿಜವೆಂದು ನಂಬಿದ ಯುವಕ ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಹಣ ಹೂಡಿಕೆ ಮುಂದುವರಿಸಿದ್ದರು. ನವೆಂಬರ್ 4ರಿಂದ 11ರವರೆಗೆ ತಮ್ಮ ಹಾಗೂ ತಾಯಿಯ ಬ್ಯಾಂಕ್ ಖಾತೆಗಳಿಂದ ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಒಟ್ಟು 4,49,000 ರೂ. ವರ್ಗಾಯಿಸಿದ್ದರು.
WhatsApp, Telegram ಮೂಲಕ ಹಣ ವರ್ಗಾವಣೆ
ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ‘Flipkart Product Task’ ಹಾಗೂ ‘Bonus Task’ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಕರು ಮೋಸ ಮಾಡಿದ್ದಾರೆ ಎಂದು ಯುವಕ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಅಪರಿಚಿತ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.















