ಮಂಗಳೂರು: ಸಾಂಗವಾಗಿ ನಡೆದ ನೀಟ್‌ ಪರೀಕ್ಷೆ..!!

ಮಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರವಿವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ದಕ್ಷಿಣ ಕನ್ನಡ ಜಿಲ್ಲೆಯ 17 ಕೇಂದ್ರಗಳಲ್ಲಿ ಸಾಂಗವಾಗಿ ನಡೆಯಿತು.

ಮಧ್ಯಾಹ್ನದ ಅನಂತರ ಪರೀಕ್ಷೆ ಆರಂಭವಾದರೂ ಬೆಳಗ್ಗಿನಿಂದಲೇ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿ, ಕೊನೆಯ ಹಂತದ ತಯಾರಿಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು.

ದ.ಕ. ಜಿಲ್ಲೆಯಲ್ಲಿ 8,291 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದರು.

ಪುತ್ತೂರು, ಮೂಡುಬಿದಿರೆ ಸೇರಿ ವಿವಿಧ ಭಾಗದಿಂದ ವಿದ್ಯಾರ್ಥಿಗಳು ಪೋಷಕರ ಜತೆ ಆಗಮಿಸಿ ಪರೀಕ್ಷೆಯಲ್ಲಿ ಭಾಗವಹಿಸಿದರು. ದ.ಕ. ಜಿಲ್ಲೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಗುಲ್ಬರ್ಗಾ, ಹಾಸನ ಸಹಿತ ಹಲವು ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ನೀಟ್‌ ಪರೀಕ್ಷಾ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಪತ್ರ ಹಾಗೂ ಗುರುತು ಚೀಟಿ ದಾಖಲೆಗಳನ್ನು ಗೇಟ್‌ನಲ್ಲಿಯೇ ಪರಿಶೀಲಿಸಿ ಒಳಬಿಡಲಾಯಿತು. ಎಲೆಕ್ಟ್ರಾನಿಕ್‌ ವಸ್ತುಗಳಾದ ಮೊಬೈಲ್ ಫೋನ್‌, ಬ್ಲೂಟೂತ್‌, ಕ್ಯಾಲ್ಕುಲೇಟರ್‌, ಗಡಿಯಾರ, ಇಯರ್‌ ಫೋನ್‌, ಮೈ ಮೇಲೆ ಧರಿಸುವ ಆಭರಣಗಳಿಗೆ ನಿರ್ಬಂಧವಿತ್ತು.

ಉಡುಪಿ: 64 ಮಂದಿ ಗೈರು
ಉಡುಪಿ ಜಿಲ್ಲೆಯ 7 ಕೇಂದ್ರದಲ್ಲಿ ಒಟ್ಟು 2,612 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 64 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 2,548 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷಾ ವ್ಯವಹಾರ ಅಥವಾ ನಕಲು, ಡಿಬಾರ್‌ ವರದಿಯಾಗಿಲ್ಲ.