ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕರೋನಾ ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸುವ ಕುರಿತು ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಯಿತು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ನಾಡದೋಣಿ ಮೀನುಗಾರರು ಸರಕಾರದ ಎಲ್ಲ ಸೂಚನೆಗಳನ್ನು ಪಾಲಿಸಬೇಕು. ಮೀನು ಖರೀದಿ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಕರಾವಳಿ ರಕ್ಷಣಾ ಪೊಲೀಸರು ಈ ಬಗ್ಗೆ ನಿಗಾ ವಹಿಸಲು ಅವರು ಸೂಚಿಸಿದರು.
ಮೀನುಗಾರರು ಮೀನು ಹಿಡಿದು ತಂದು ಚಿಲ್ಲರೆಯಾಗಿ ಮಾರಾಟ ಮಾಡುವಂತಿಲ್ಲ. ನಿಗದಿತ ಸ್ಥಳಕ್ಕೆ ದೋಣಿ ತಂದು, ಹರಾಜು ಕೂಗಿ, ನಿಗದಿಪಡಿಸಿದ ಖರೀದಿದಾರರಿಗೆ ಮಾತ್ರ ಮಾರಾಟ ಮಾಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀಗಣೇಶ್, ಉಪವಿಭಾಗಾಧಿಕಾರಿ ಮದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ಮೀನುಗಾರಿಕೆ ಉಪನಿರ್ದೇಶಕ ಹರೀಶ್, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 11 ಸ್ಥಳಗಳಲ್ಲಿ ನಾಡದೋಣಿಯಲ್ಲಿ ತಂದ ಮೀನುಗಳನ್ನು ಮಾರಾಟ ಮಾಡಲು ಸ್ಥಳಗಳನ್ನು ನಿಗದಿಪಡಿಸಲಾಯಿತು.
ಸ್ಥಳಗಳು: ಬೈಕಂಪಾಡಿ, ಗುಡ್ಡಕೊಪ್ಲ, ಮುಕ್ಕ, ಸಸಿಹಿತ್ಲು, ಸುಲ್ತಾನ್ ಬತ್ತೇರಿ, ಹೊಯಿಗೆ ಬಜಾರ್, ಉಳ್ಳಾಲ ಕೋಡಿ, ಕೋಟೆಪುರ, ಮೊಗವೀರಪಟ್ಣ, ಉಳ್ಳಾಲ, ಸೋಮೇಶ್ವರ.