ಜನರ ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ: ಶಾಸಕ ಕಾಮತ್

ಮಂಗಳೂರು: ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಇಂದು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ನಡೆಸಿದರು.
ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಭೇಟಿ ಕಾರ್ಯಕ್ರಮ ವಾರದ ಒಂದು ದಿನ ನಡೆಸಲಾಗುತ್ತದೆ. ಸಾರ್ವಜನಿಕ ವಲಯದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಕಾರಿಯಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಯೋಜನೆ ರೂಪಿಸಿ ಕೈಗೊಳ್ಳುವ ದೊಡ್ಡಮಟ್ಟದ ಕಾಮಗಾರಿಗಳ ಹೊರತಾಗಿ ತಕ್ಷಣ ಪರಿಹರಿಸಬಹುದಾದ ಕೆಲಸಗಳನ್ನು ಮಾಡಿಕೊಡುತ್ತೇನೆ. ಸ್ಥಳೀಯ ಮುಖಂಡರ ಮೂಲಕ ಈಗಾಗಲೇ ಅನೇಕ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಉಳಿದಂತೆ ತಮ್ಮ ಪರಿಸರದ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.