ಉಡುಪಿ: ಮಂಗಳೂರು- ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಅದ್ದೂರಿ ಸ್ವಾಗತ

ಉಡುಪಿ: ಕರಾವಳಿ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಡುಗೆಯಾಗಿ ನೀಡಿರುವ ಮಂಗಳೂರು- ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಥಮ ಪ್ರಯಾಣ ಹಿನ್ನೆಲೆಯಲ್ಲಿ ಡಿಸೆಂಬರ್ 30 ರಂದು ಉಡುಪಿಯಲ್ಲಿ ಅದ್ದೂರಿ ಸ್ವಾಗತ ಸಮಾರಂಭ ಆಯೋಜಿಸಲಾಯಿತು.

ಕರಾವಳಿ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದು, ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತಿಯಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಸುವರ್ಣ, ಸುನಿಲ್ ಕುಮಾರ್, ಗುರುರಾಜ್ ಗಂಟಿಹೊಳೆ ಹಾಗೂ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.

ಎಂಟು ಬೋಗಿಯನ್ನು ಒಳಗೊಂಡ 20646 ನಂಬರ್‌ನ ವಂದೇ ಭಾರತ್ ರೈಲು ಇದಾಗಿದ್ದು, ಮಂಗಳೂರು-ಉಡುಪಿ-ಕಾರವಾರ ಮೂಲಕ ಮಡಗಾಂವ್‌ಗೆ ಪ್ರಯಾಣಿಸಲಿದೆ.

ವಾರದ ಆರು ದಿನ ಮಂಗಳೂರಿನಿಂದ ಮಡಗಾಂವ್‌ಗೆ ಈ ವಂದೇ ಭಾರತ್‌ ರೈಲು ಓಡಾಟ ನಡೆಸಲಿದೆ. ಬೆಳಗ್ಗೆ 8.30 ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪಲಿದೆ. ಸಂಜೆ 6.10 ಕ್ಕೆ ಮಡಗಾಂವ್‌ನಿಂದ ಹೊರಟರೆ ರಾತ್ರಿ 10.45 ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ.