ಮಂಗಳೂರು: ಯಡಿಯೂರಪ್ಪ ಅವರಿಗೆ ಬಹುಮತ ಇಲ್ಲ, ಅಲ್ಪ ಮತದ ಸರಕಾರವಾಗಿದ್ದು, ಸಂವಿಧಾನದ ನಿಯಮ ಗಾಳಿಗೆ ತೂರಿ ಸರಕಾರ ರಚಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ, ದೇಶದಲ್ಲಿ ಎಲ್ಲೂ ನಡೆಯಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ರಾಜ್ಯಪಾಲರು ಪಕ್ಷಪಾತ ಮಾಡಿದ್ದಾರೆ. ಯಾರಾದರೂ ಇದರ ವಿರುದ್ಧ ಕೊರ್ಟ್ ಹೋದರೆ ಈ ಸರ್ಕಾರ ಬಿದ್ದು ಹೋಗುತ್ತದೆ. ಸದನದ ಸದಸ್ಯರ ಸಂಖ್ಯೆ ಕೂಡ ಗಣನೆಗೆ ತೆಗೆದುಕೊಳ್ಳಲಿಲ್ಲ. ಬಿಜೆಪಿಯದ್ದು, ಸಂಖ್ಯಾಬಲ ಇಲ್ಲದ, ಜನ ಬೆಂಬಲದ ಸರಕಾರ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ.
ಈಗಿನ ಸರಕಾರ ಆರ್ಎಸ್ಸೆಸ್, ಬಿಜೆಪಿ, ಅತೃಪ್ತರು ಮಾಡಿದ ಸರಕಾರ. ಐದು ಮಂದಿ ಉಪಮುಖ್ಯಮಂತ್ರಿ ಆಗಬೇಕು ಅಂತ ಹೇಳಿದ್ದಾರೆ ಎಂದರು.
ಉಮೇಶ್ ಕತ್ತಿ ಅವರು ಅತೃಪ್ತ ೧೫ ಜನರಿಗೂ ಮಂತ್ರಿ ಪದವಿ ನೀಡಬೇಕು ಅಂತ ಹೇಳಿದ್ದಾರೆ.
ಇವರೆಲ್ಲ ಸೇರಿ ರಾಜ್ಯವನ್ನು ಲೂಟಿ ಮಾಡಲು ಮತ್ತೆ ಬಂದಿದ್ದಾರೆ. ನಮ್ಮ ಸರಕಾರದ ಯೋಜನೆಗೆ ತೊಂದರೆ ಮಾಡಿದ್ರೆ ಹೋರಾಟ ಮಾಡಬೇಕಾಗುತ್ತೆ. ನಮ್ಮ ಸರಕಾರದ ಯೋಜನೆಯಿಂದ ಜನರು ಇಂದು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.