ಮಂಗಳೂರು: ಹಾಲಿನ ವಾಹನದಲ್ಲಿ ಅಕ್ರಮ ಗೋಮಾಂಸ ಸಾಗಾಟ; ಪತ್ತೆ ಹಚ್ಚಿದ ಬಜರಂಗದಳ

ಮಂಗಳೂರು: ಹಾಲು ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಮಂಗಳವಾರ ಮುಂಜಾನೆ ಮಂಗಳೂರು ನಗರದಲ್ಲಿ ನಡೆದಿದೆ.

ಬಿಸಿರೋಡ್ ಕಡೆಯಿಂದ ಮಂಗಳೂರು ನಗರದೊಳಗೆ ಆಗಮಿಸುತ್ತಿದ್ದ ಆರೋಕ್ಯ ಹಾಲು ಪೂರೈಕೆ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಬಜರಂಗದಳ ಕಾರ್ಯಕರ್ತರು, ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಹಾಲಿನ ವಾಹನದಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಪಂಪ್ ವೆಲ್ ನಲ್ಲಿ ವಾಹನವನ್ನು ಅಡ್ಡಗಟ್ಟಿದ್ದರು. ಆದರೆ ಆರೋಪಿಗಳು ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದು, ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ನಗರದ ವೆನ್ಲಾಕ್ ಆಸ್ಪತ್ರೆ ಬಳಿ ಆರೋಪಿಗಳನ್ನು ಅಡ್ಡಗಟ್ಟುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಈ ವೇಳೆ ಒಬ್ಬ ಆರೋಪಿ ಮಾತ್ರ ಸೆರೆ ಸಿಕ್ಕಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ವಾಹನದಲ್ಲಿ ಐದು ಕ್ವಿಂಟಾಲ್ ಗೂ ಅಧಿಕ ಗೋ ಮಾಂಸ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.