ತನ್ನ ಎರಡೂ ಕೈಗಳಿಂದ ಬರೆಯಬಲ್ಲ ಮಂಗಳೂರಿನ ಆದಿ ಸ್ವರೂಪ ಸಾಮರ್ಥ್ಯಕ್ಕೆ ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು!

ಮಂಗಳೂರು: ಬಲ ಮತ್ತು ಎಡಗೈಗಳನ್ನು ಏಕಕಾಲದಲ್ಲಿ ಬಳಸಿ ಬರೆಯುವ ವಿಶಿಷ್ಟ ಬಹುಮುಖ ಸಾಮರ್ಥ್ಯ ಹೊಂದಿರುವ ಮಂಗಳೂರಿನ ಆದಿ ಸ್ವರೂಪಾ ವೀಡಿಯೋ ಒಂದನ್ನು ಟ್ವಿಟರ್ ಬಳಕೆದಾರರೊಬ್ಬರು ಮರುಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆದಿ ಸ್ವರೂಪ ಪ್ರತಿಭೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಸ್ವಯಂ-ಶಿಕ್ಷಣವನ್ನು ಪಡೆದು ತನ್ನ ಈ ಸಾಮರ್ಥ್ಯವನ್ನು ತಾನೇ ನಿರ್ಮಿಸಿಕೊಂಡಿರುವ ಆದಿ ಸ್ವರೂಪಾ ಈಗಾಗಲೇ ಒಂದು ನಿಮಿಷದಲ್ಲಿ ತನ್ನ ಎರಡೂ ಕೈಗಳನ್ನು ಏಕಕಾಲದಲ್ಲಿ ಅತಿ ಹೆಚ್ಚು ಪದಗಳನ್ನು ಬರೆದು ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ. ಇದರ ಜೊತೆಗೆ, ಆದಿ ಸ್ವರೂಪಾ ತನ್ನ ಅಸಾಧಾರಣ ದೃಶ್ಯ ಸ್ಮರಣೆಗಾಗಿ ಭಾರತದ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ಸ್ಥಾನ ಪಡೆದಿದ್ದಾರೆ.

ಆಕೆಯ ಅಸಾಧಾರಣ ಸಾಮರ್ಥ್ಯವನ್ನು ಇತ್ತೀಚೆಗೆ ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಅವರು ಟ್ವಿಟರ್‌ನಲ್ಲಿ ಮರು-ಹಂಚಿಕೊಂಡಿದ್ದಾರೆ. ಆದಿ ಸ್ವರೂಪಾ ಅವರು ಲಕ್ಷಾಂತರ ಜನರಲ್ಲಿ ಒಬ್ಬರು ಮಾತ್ರ ಕರಗತ ಮಾಡಿಕೊಳ್ಳುವ ಅಪರೂಪದ ಸಾಮರ್ಥ್ಯವನ್ನು ಕಲಿತಿದ್ದಾಳೆ, ಆಕೆ ಹನ್ನೊಂದು ವಿಭಿನ್ನ ಶೈಲಿಗಳಲ್ಲಿ ಬರೆಯಬಲ್ಲಳು ಮತ್ತು ಅವಳ ಎರಡೂ ಮೆದುಳುಗಳು ಒಂದೇ ಸಮಯದಲ್ಲಿ ಕೆಲಸ ಮಾಡುತ್ತವೆ ಎಂದು ಅವರು ಬರೆದಿದ್ದಾರೆ.

ಈ ವೀಡಿಯೋ ನೆಟ್ಟಿಗರ ಗಮನವನ್ನು ಆಕರ್ಷಿಸಿದ್ದು, ಆಕೆಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.