ಮಂಗಳೂರು: ಇಲ್ಲಿನ ಶ್ರೀ ಉಲ್ಕಾ(Shree Ulka LLP) ಎಂಬ ಫಿಶ್ ಮೀಲ್ ಕಾರ್ಖಾನೆಯೊಂದರಲ್ಲಿ ಭಾನುವಾರ ರಾತ್ರಿ ವಿಷಾನಿಲ ಸೋರಿಕೆಯಾದ ಪರಿಣಾಮ ಐದು ಮಂದಿ ಮೃತಪಟ್ಟ ಮತ್ತು ಹಲವು ಮಂದಿ ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ.
ಸಮೀರುಲ್ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ ಸಾಬ್ ಹಾಗೂ ಇನ್ನಿಬ್ಬರು ಮೃತಪಟ್ಟಿದ್ದಾರೆ.
ಹಲವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಿಧೆಡೆಯಿಂದ ಬರುವ ಮೀನುಗಳನ್ನು ಶುದ್ಧೀಕರಿಸುವ ಬೃಹತ್ ಟ್ಯಾಂಕಿಗೆ ಇಳಿದ ಪಶ್ಚಿಮ ಬಂಗಾಳದ ಐವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಎಂದಿನಂತೆ ಮೀನು ಶುದ್ಧೀಕರಣಗೊಳಿಸುವ 20 ಅಡಿ ಆಳವುಳ್ಳ ಬೃಹತ್ ಟ್ಯಾಂಕಿಗೆ ಇಳಿದ 8 ಮಂದಿ ಕಾರ್ಮಿಕರು ಸ್ವಚ್ಛಗೊಳಿಸಿದ ಮೀನನ್ನು ತೆಗೆಯುವ ಸಂದರ್ಭ ಈಜಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಯಾವುದಾದರೂ ರಾಸಾಯನಿಕ ಪದಾರ್ಥದಿಂದ ಅಸ್ವಸ್ಥಗೊಂಡರೇ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂಬುದರ ಬಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಿಶ್ ಮೀಲ್ ಕಾರ್ಖಾನೆಯನ್ನು ಬಂದ್ ಮಾಡಲಾಗಿದೆ.