ಮಂಗಳೂರು: ಇವಿಎಂ ವಿರೋಧಿಸಿ‌ ಮಹಿಳಾ ಕಾಂಗ್ರೆಸ್ ನಿಂದ‌ ಪ್ರತಿಭಟನೆ

ಮಂಗಳೂರು: ಇವಿಎಂ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಬುಧವಾರ ಮೌನ ಪ್ರತಿಭಟನೆ ಹಾಗೂ ಅಂಚೆ ಪತ್ರ ಚಳವಳಿ ನಡೆಯಿತು.
ಇವಿಎಂ ಅವ್ಯವಸ್ಥೆಯ ಆಗರವಾಗಿದೆ. ಇವಿಎಂ ಯಂತ್ರ ಹ್ಯಾಕ್ ಮಾಡಿ ತಮಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸಬಹುದಾಗಿದೆ. ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇವಿಎಂ ತೊಲಗಬೇಕು ಮತ್ತು ಮತಪತ್ರ ಮತ್ತೆ ಜಾರಿಗೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ಅಂಗವಾಗಿ ಕರ್ನಾಟಕದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಂಚೆ ಪತ್ರವನ್ನು ರಾಷ್ಟ್ರಪತಿಯವರಿಗೆ ಕಳುಹಿಸಲಾಗುತ್ತಿದೆ. ಪ್ರತಿಭಟನೆಯಲ್ಲೂ ಅಂಚೆಪತ್ರ ಬರೆದು ರಾಷ್ಟ್ರಪತಿಯವರಿಗೆ ಅಂಚೆ ಮೂಲಕ ರವಾನಿಸಲಾಯಿತು.