ಮಂಗಳೂರು: ಬಿಜೆಪಿಯ ಮೇಲೆ ವಿಶ್ವಾಸವಿಟ್ಟು ಮಂಗಳೂರಿನ ಜನತೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ನೀಡಿದ್ದಾರೆ. ಜನತೆಯ ಆಶಯಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜವಾಬ್ದಾರಿಯುತ ಆಡಳಿತ ನೀಡಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಬರಬೇಕು ಎಂಬ ನೆಲೆಯಲ್ಲಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಮಂಗಳೂರು ಮಹಾನಗರ ಅಭಿವೃದ್ಧಿಗೆ ಈಗ ಇನ್ನಷ್ಟು ವೇಗ ಸಿಗಲಿದೆ. ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ಬಿಜೆಪಿ ಆಡಳಿತ ನಡೆಸಲಿದೆ. ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜತೆಗೆ ನಗರದ ಜ್ವಲಂತ ಸಮಸ್ಯೆಗಳಿಗೆ ಬಿಜೆಪಿ ಸ್ಪಂದಿಸಲಿದೆ.
ಗೆಲುವು ಸಾಧಿಸಿದ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಪಕ್ಷದ ಗೆಲುವಿನ ಅಹರ್ನಿಶಿ ದುಡಿದ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಅಭ್ಯರ್ಥಿಗಳು, ಕಾರ್ಯಕರ್ತರಿಗೆ ಈ ಸಂದರ್ಭ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.