ಮಂಗಳೂರಲ್ಲಿ ಕೊರೊನ ಪತ್ತೆ: ವಿಮಾನದಲ್ಲಿದ್ದ 165 ಪ್ರಯಾಣಿಕರ ಮೇಲೂ ನಿಗಾ: ಜಿಲ್ಲಾಧಿಕಾರಿ

ಮಂಗಳೂರು: ವಿಶ್ವವನ್ನೇ ತಲ್ಲಣ ಮೂಡಿಸಿರೋ ಕೊರೊನಾ ಮಹಾಮಾರಿ ಇದೀಗ ಕರಾವಳಿಗೂ ಕಾಲಿಟ್ಟಿದೆ. ಮಂಗಳೂರಿನಲ್ಲಿ ಯುವಕನಿಗೆ ಕೊರೊನಾ ಇರೋದು ದೃಢಪಟ್ಟಿದೆ. ಭಟ್ಕಳ ಮೂಲದ 22 ವರ್ಷದ ಯುವಕನಲ್ಲಿ ಕೊರೊನಾವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತ ವ್ಯಕ್ತಿ ಮಾರ್ಚ್ 19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5:45ಕ್ಕೆ ದುಬೈಯಿಂದ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ ಲಕ್ಷಣಗಳನ್ನು ಕಾಣಿಸಿಕೊಂಡಿದ್ದು, ನೇರವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಆರೋಗ್ಯ ತಪಾಸಣಾ ವರದಿಯಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ಇರೋದು ಪತ್ತೆಯಾಗಿದೆ. ಹಾಗಾಗಿ ಇತರ ಜನರು ಅವರ ಸಂಪರ್ಕದಲ್ಲಿರುವ ಸಾಧ್ಯತೆಯಿಲ್ಲ. ಆದರೆ ವಿಮಾನದಲ್ಲಿದ್ದ 165 ಪ್ರಯಾಣಿಕರ ಮೇಲೂ ನಿಗಾ ಇಡಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಕೊರೊನಾ ಸೋಂಕು ಹರಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.