ಮಂಗಳೂರು: ನಿರಂತರ ಮಳೆಗೆ ಕಾಂಪೌಂಡ್ ಗೋಡೆ ಮನೆಯೊಂದರ ಮೇಲೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮಂಗಳೂರಿನ ಶಿವನಗರ ಕೊಡಕಲ್ ನಲ್ಲಿ ಭಾನುವಾರ ಸಂಭವಿಸಿದೆ.
ಪಡೀಲ್‌ನ ಶಿವನಗರದ ನಿವಾಸಿ ರಾಮಣ್ಣ ಎಂಬುವವರ ಮಕ್ಕಳಾದ ವರ್ಷಿಣಿ ಹಾಗೂ ವೇದಾಂತಿ, ಮೃತಪಟ್ಟ ಮಕ್ಕಳು.
ಮೂಲತಃ ಉಪ್ಪಿನಂಗಡಿಯವರಾದ ರಾಮಣ್ಣ ಕಣ್ಣೂರಿನ ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡ್ತಿದ್ದರು. ಇತ್ತೀಚೆಗೆ ಪಡೀಲ್ ಗೆ ಬಂದು ವಾಸವಾಗಿದ್ದರು. ಮಂಗಳೂರು ನಗರದ ಕಪಿತಾನಿಯ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವರ್ಷಿಣಿ ಹಾಗೂ ಎರಡನೇ ತರಗತಿಯಲ್ಲಿ ವೇದಾಂತಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ನಾಳೆ ಶಾಲೆಯಲ್ಲಿ ಪರೀಕ್ಷೆ ಇದ್ದ ಕಾರಣ ಪರೀಕ್ಷೆಯ ಸಿದ್ಧತೆಗಾಗಿ ಮನೆಯ ಸಮೀಪ ಕೂತ್ಕೊಂಡು ಮಕ್ಕಳು ಓದುತ್ತಿದ್ದರು. ಇದೇ ವೇಳೆ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಪುಸ್ತಕ ಓದುತ್ತಿದ್ದ ಮಕ್ಕಳಿಬ್ಬರೂ ಮಣ್ಣಿನ ಕೆಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ತಂದೆ-ತಾಯಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಹೇಳಿಕೆ ನೀಡಿದ್ದಾರೆ.