ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಮುಂದೂಡಿಕೆ!

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯ ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಜೂನ್ 3ರಂದು ನಡೆಯಲಿದೆ ಎನ್ನಲಾಗಿತ್ತು, ಆದರೆ ಈ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇದೇ ತಿಂಗಳೊಳಗೆ ಹೊಸ ದಿನಾಂಕ ನಿಗದಿಪಡಿಸಿ ಪರೀಕ್ಷಾರ್ಥ ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ನೈಋತ್ಯ ರೈಲ್ವೆ ಇಲಾಖೆಯು ಜೂನ್ ತಿಂಗಳಲ್ಲಿ ವಂದೇ ಭಾರತ್ ರೈಲಿನ ಟ್ರಯಲ್ ರನ್ ನಡೆಸಲು ತಾತ್ಕಾಲಿಕ ಯೋಜನೆ ರೂಪಿಸಿದೆ. ಆರಂಭದಲ್ಲಿ ನಾಲ್ಕು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುತ್ತದೆ ಎಂದು ಹೇಳಲಾಗಿದ್ದರೂ, ಅಂತಿಮ ನಿಲ್ದಾಣಗಳ ಆಯ್ಕೆ ಇನ್ನೂ ಪೂರ್ಣಗೊಂಡಿಲ್ಲ.

ಘಾಟಿ ಪ್ರದೇಶದಲ್ಲಿ ವಿಶೇಷ ಪರೀಕ್ಷೆ

ಟ್ರಯಲ್ ರನ್ ವೇಳೆ ಯಶವಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ರೈಲು ಹೊರಡಲಿದ್ದು, ಆಟೋ ಎಮರ್ಜೆನ್ಸಿ ಬ್ರೇಕ್ (AEB) ವ್ಯವಸ್ಥೆ ಹೊಂದಿರುವ ಎಂಟು ಬೋಗಿಗಳ ವಂದೇ ಭಾರತ್ ರೈಲನ್ನು ಬಳಸಲಾಗುತ್ತದೆ. ಹಾಸನ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ.

ಒಂದು ಬದಿಯ ಪ್ರಯಾಣಕ್ಕೆ ಸುಮಾರು 8.5 ಗಂಟೆಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ರೈಲಿನ ಸಮಯ ಪಾಲನೆ, ಸಿಬ್ಬಂದಿ ಬದಲಾವಣೆ, ನಿಲುಗಡೆ ಅವಧಿ, ವೇಗ ನಿಯಂತ್ರಣ ಮತ್ತು ಸುರಕ್ಷತಾ ವ್ಯವಸ್ಥೆಗಳ ಕುರಿತು ಸಮಗ್ರ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ. ಅದರ ಆಧಾರದ ಮೇಲೆ ಅಂತಿಮ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಪ್ರಕಟಿಸಲಿದೆ.

57 ಸುರಂಗ, 226 ಸೇತುವೆಗಳ ಸವಾಲಿನ ಮಾರ್ಗ

ಬೆಂಗಳೂರು–ಮಂಗಳೂರು ಮಾರ್ಗದ ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ ಘಾಟಿ ವಿಭಾಗವು ರೈಲ್ವೆಗೆ ಅತ್ಯಂತ ಸವಾಲಿನ ಭಾಗವಾಗಿದೆ. ಸುಮಾರು 55 ಕಿ.ಮೀ ಉದ್ದದ ಈ ವಿಭಾಗದಲ್ಲಿ ಒಟ್ಟು 57 ಸುರಂಗಗಳು, 226 ಸೇತುವೆಗಳು ಹಾಗೂ 108 ತಿರುವುಗಳಿವೆ.

ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಎರಡು ವರ್ಷಗಳು ಬೇಕಾಗಿದ್ದು, ಕಳೆದ ಫೆಬ್ರವರಿಯಲ್ಲಿ ಅಂತಿಮ ಅನುಮೋದನೆ ದೊರೆತಿದೆ. ನಂತರ ಎಲ್ಲ ವಿಧದ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.

ಗಂಟೆಗೆ 30 ಕಿ.ಮೀ ವೇಗ ಮಿತಿ

ಘಾಟಿ ಪ್ರದೇಶದಲ್ಲಿ ರೈಲು ಸಂಚಾರಕ್ಕೆ ಆಟೋ ಎಮರ್ಜೆನ್ಸಿ ಬ್ರೇಕ್ (AEB) ವ್ಯವಸ್ಥೆ ಕಡ್ಡಾಯವಾಗಿದೆ. ಈ ವ್ಯವಸ್ಥೆ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀಗೆ ಮಿತಿಗೊಳಿಸುತ್ತದೆ. ನಿಗದಿತ ವೇಗಕ್ಕಿಂತ ಹೆಚ್ಚು ಚಲಿಸಿದರೆ ಬ್ರೇಕ್‌ಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಿ ರೈಲನ್ನು ನಿಯಂತ್ರಣಕ್ಕೆ ತರುತ್ತವೆ.

ಎಇಬಿ ವ್ಯವಸ್ಥೆಯ ಮರು ಅಳವಡಿಕೆ ಮತ್ತು ಸುರಕ್ಷತಾ ಪರಿಶೀಲನೆಗಳ ಕಾರಣದಿಂದ ಟ್ರಯಲ್ ರನ್ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಕರಾವಳಿಗೆ ವೇಗದ ಸಂಪರ್ಕ

ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಕಾರ್ಯಾಚರಣೆ ಆರಂಭವಾದ ಬಳಿಕ ಕರಾವಳಿ ಮತ್ತು ರಾಜಧಾನಿ ನಡುವಿನ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ಪ್ರವಾಸೋದ್ಯಮ, ವ್ಯಾಪಾರ, ಉದ್ಯೋಗ ಹಾಗೂ ದೈನಂದಿನ ಪ್ರಯಾಣಿಕರಿಗೆ ಈ ರೈಲು ಮಹತ್ವದ ಅನುಕೂಲ ಒದಗಿಸುವ ನಿರೀಕ್ಷೆಯಿದೆ.