ಮಂಗಳೂರು: ದೇಶ ಕಂಡ ಅತಿ ದೊಡ್ಡ ವಿಮಾನ ದುರಂತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ಇಂದಿಗೆ 10 ವರ್ಷ ತುಂಬಿದೆ.
ಮೇ 22 2010ರಂದು ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ವಿಮಾನ ಇನ್ನೇನು ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ವೆವೇಯಿಂದ ಜಾರಿ ನಿಯಂತ್ರಣ ತಪ್ಪಿ ಸಂಭವಿಸಿದ ಭಾರಿ ದುರಂತಕ್ಕೆ ಇಡೀ ದೇಶವೇ ಮರುಗಿತ್ತು.
158 ಮಂದಿಯ ಹಾಗೂ ಅವರ ಕುಟುಂಬದವರ ಕನಸುಗಳು ಕಮರಿ ಹೋಗಿತ್ತು. ಈ ಮಹಾ ದುರಂತದಲ್ಲಿ ಎಂಟು ಮಂದಿ ಮಾತ್ರ ಬದುಕುಳಿದಿದ್ದರು.
ರನ್ವೇಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿ ವಿಮಾನ ರನ್ವೇ ಬಿಟ್ಟು ಹೊರಕ್ಕೆ ಹೋಗಿ ನೇರವಾಗಿ ವಿಮಾನ ನಿಲ್ದಾಣದ ಆವರಣ ಗೋಡೆಯ ಫ್ಯಾನ್ಗೆ ಢಿಕ್ಕಿ ಹೊಡೆದು ಗುಡ್ಡೆಯಿಂದ ಕೆಳಗುರುಳಿತ್ತು. ಇದೇ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಆದರೆ ಈ ದುರಂತದಲ್ಲಿ ಮಡಿದ ಆನೇಕರಿಗೆ ಪರಿಹಾರ ದೊರೆತಿಲ್ಲ ಎಂಬುದು ಬೇಸರದ ಸಂಗತಿ.
ಸುಪ್ರೀಂಕೋರ್ಟ್ ಆದೇಶ:
ಇದೀಗ ದುರಂತದಲ್ಲಿ ಮಡಿದ 45 ವರ್ಷದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ನೀಡಲಾಗುವ ಧನ ಸಹಾಯವನ್ನು ಹೆಚ್ಚಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ. ಆ ಪ್ರಕಾರ, ದುರಂತದಲ್ಲಿರುವ ಮಡಿದಿರುವ ಮಹೇಂದ್ರ ಕೊಡ್ಕಣಿ ಅವರ ಪತ್ನಿ, ಪುತ್ರಿ ಹಾಗೂ ಪುತ್ರ 7.64 ಕೋಟಿ ರೂ. ಹಾಗೂ ವರ್ಷಕ್ಕೆ ಶೇಕಡಾ 9ರಷ್ಟು ಬಡ್ಡಿದರಲ್ಲಿ ಪರಿಹಾರ ಧನವನ್ನು ಗಿಟ್ಟಿಸಿಕೊಳ್ಳಲಿದ್ದಾರೆ. ಇದು ಈ ದುರಂತದಲ್ಲಿ ಸಾವನ್ನಪ್ಪಿದವರ ಪೈಕಿ ಪಡೆಯುವ ಅತಿ ದೊಡ್ಡ ಪರಿಹಾರ ಮೊತ್ತ ಇದಾಗಿದೆ. ಈ ಬಗ್ಗೆ ಎನ್ಸಿಡಿಆರ್ಸಿ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಕುಟುಂಬವನ್ನು ಪ್ರತಿನಿಧಿಸಿ ಪ್ರಕರಣ ವಾದಿಸಿರುವ ವಕೀಲ ಯಶ್ವಂತ್ ಶೆಣೈ ಮಾಹಿತಿ ನೀಡಿದ್ದಾರೆ.