ಮಂಗಳೂರು: ಸಾಲದ ಕಂತು ಮರುಪಾವತಿಗೆ ಒತ್ತಡ ಹೇರಿದರೆ ಕ್ರಮ; ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ಸರಿಯಾಗಿ ಕೆಲಸವಿಲ್ಲ. ಸಾಲದ ಕಂತು ಮರು ಪಾವತಿಸಲು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು, ಫೈನಾನ್ಸ್ ಗಳು, ಮೈಕ್ರೋ ಫೈನಾನ್ಸ್ ಗಳು ಸಾಲದ ಕಂತು ಪಾವತಿಸುವಂತೆ ಒತ್ತಡ ಹೇರಬಾರದು ಎಂದು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.

ಲಾಕ್ ಡೌನ್ ವೇಳೆಯಲ್ಲಿ ಸಾಲ ನೀಡಿರುವ ಯಾವುದೇ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಸಂಸ್ಥೆ ವಿರುದ್ಧ ದೂರು ನೀಡಬಹುದು. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಗಳು ಹಾಗೂ ಸಹಕಾರಿ ಸಂಸ್ಥೆಗಳು ಸಾಲ ಪಾವತಿಸುವಂತೆ ಒತ್ತಡ ಹೇರಿದ್ದಲ್ಲಿ ಅಂತಹ ಸಂದರ್ಭದಲ್ಲಿ ಸಹಕಾರಿ ಸಂಘಗಳ ಉಪ ನಿಬಂಧಕರಾದ ಪ್ರವೀಣ್ ಬಿ. ನಾಯಕ್ ಅವರಿಗೆ ದೂರು ನೀಡುವಂತೆ ತಿಳಿಸಲಾಗಿದೆ. ಇತರೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಲೀಡ್ ಡಿಸ್ಟ್ರಿಕ್ ಮ್ಯಾನೇಜರ್ ಪ್ರವೀಣ್ ಮೊಬೈಲ್ ನಂ. 94498 60916 ಗೆ ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.