ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ: ಜಿಲ್ಲಾಧಿಕಾರಿ ಜಗದೀಶ್

ಉಡುಪಿ ಜೂನ್ 18:  ಕೊರೋನಾ ವಿರುದ್ದದ ಹೋರಾಟ ನಿರಂತರ ವಾಗಿದ್ದು, ಈ ಹೋರಾಟದಲ್ಲಿ ಬಹಳ ಮುಖ್ಯವಾದ ಅಸ್ತ್ರ ಎಂದರೆ ಮಾಸ್ಕ್ ಧರಿಸುವಿಕೆ, ಈ ನಿಟ್ಟಿನಲ್ಲಿ ಸಾರ್ವಜನಿಕರೆಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ಗುರುವಾರ  ನಗರಸಭೆಯ ಆವರಣದಲ್ಲಿ, ಜಿಲ್ಲಾಡಳಿತ  ಮತ್ತು ಉಡುಪಿ ನಗರಸಭೆ ವತಿಯಿಂದ, ನಡೆದ  ಮಾಸ್ಕ್ ದಿನ ಆಚರಣೆ ಜನಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಸ್ಕ್ ಬಳಕೆಯಿಂದ ಶೇಕಡಾ 50 ರಷ್ಟು ಕೊರೋನಾ ಸೋಂಕನ್ನು ತಡೆಗಟ್ಟಬಹುದಾಗಿದ್ದು, ಉಡುಪಿಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27000ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ.  ಮುಂದಿನ ದಿನಗಳಲ್ಲಿ ಸರಿಯಾಗಿ ಮಾಸ್ಕ್ ಹಾಕದವರಿಗೆ ಸಹ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟುವ ಮೂಲಕ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ. ಅದೇ ರೀತಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗುವುದರಲ್ಲಿಯೂ ನಾವೇ ಮೊದಲೇ ಸ್ಥಾನದಲ್ಲಿದ್ದೆವೆ. ಜಿಲ್ಲೆಯಲ್ಲಿ ಸದ್ಯ 130 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲ ನಾಲ್ಕೈದು ದಿನಗಳಲ್ಲಿ ಗುಣ ಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಕೊರೋನದ ಬಗ್ಗೆ ಕೂಡ ಆತಂಕ ಪಡುವ ಅಗತ್ಯ ಇಲ್ಲ. ಹೊರರಾಜ್ಯದಿಂದ ಬರುವವರಿಂದ ಸಾಕಷ್ಟು ಅಂತರವನ್ನು ಕಾಪಾಡಿಕೊಳ್ಳಬೇಕು. ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರನ್ನು ಹೋಮ್ ಕ್ವಾರಂಟೇನ್‌ನಲ್ಲಿ ಇರಿಸಿ, ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಈ ಮನೆಗಳಿಂದ ಯಾರಾದರೂ ಹೊರಗಡೆ ಬಂದರೆ ಅವರ ಬಗ್ಗೆ ಸ್ಥಳೀಯರು ತಕ್ಷಣ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಉಡುಪಿ ಬಸ್ ನಿಲ್ದಾಣ ಮತ್ತು ರೈಲ್ವೆ ಸ್ಟೆಷನ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಸ್ಯಾನಿಟೈಸರ್ ಹಾಗೂ ಕೈ ತೊಳೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರು ಮತ್ತು ವ್ಯಾಪರಸ್ಥರು ಅವರ ಸ್ಥಳಗಳಲ್ಲಿ ಕೈ ತೊಳೆಯುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಕೊರೋನಾ ವಿರುದ್ದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಧರಿಸಬೇಕಾದ ಅವಶ್ಯಕ ಅಸ್ತ್ರ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ನಗರಸಭೆಯಿಂದ ಜೋಡುಕಟ್ಟೆಯವರೆಗೆ ಜಾಥಾ ನಡೆಯಿತು.