ಮಂಡಲ ಕಲಾಚತುರ, ಕ್ರಿಯಾಶೀಲತೆಯಲ್ಲೇ ಬೆರಗಾಗಿಸೋ ಸುಂದರ ಕಲಾಕಾರ “ಮುರಳೀಧರ ಪುತ್ರಾಯ”

ಹಿಂದೂ ಸಂಸ್ಕೃತಿಯಲ್ಲಿ ಪೂಜೆ, ಆಚರಣೆಗಳಿಗೆ ಉನ್ನತ ಸ್ಥಾನವಿದೆ, ಅದರಲ್ಲೂ ಮಂಡಲಗಳ ಮೂಲಕ ವಿಶೇಷವಾದ ಪೂಜ್ಯನೀಯ ಸ್ಥಾನವನ್ನೂ ಕಲ್ಪಿಸಿ ದೇವರನ್ನು ಆಹ್ವಾನಿಸುವ ಕ್ರಮಗಳು ವೈದಿಕ ವಿಧಾನದಲ್ಲಿದೆ. ಆ ಮಂಡಲ ರಚನೆಯೂ ಸಾಮಾನ್ಯವಾದುದಲ್ಲ. ಮಂಡಲ ಕಲೆಯಲ್ಲಿ ನುರಿತರಾದವರೊಬ್ಬರ ಪರಿಚಯ ಮಾಡಿಕೊಡ್ತೇವೆ ನೋಡಿ. ಇವರ ಸಾಧನೆ ಗಮನೀಯ. ಇವರ ಕೈಯಲ್ಲರಳಿದ  ರಂಗೋಲಿಗಳ ಮಂಡಲಗಳು, ಮಂಟಪ ರಚನೆಗಳು ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ.

ಇವರೇ ಕಾರ್ಕಳ ತಾಲೂಕಿನ ಅಜೆಕಾರಿನ ಕುರ್ಸು ಕಟ್ಟೆಯ  ಮುರಳಿಧರ ಪುತ್ರಾಯ. ಇವರು ಬಿಡಿಸಿದ ಮಂಡಲಗಳು ವಿಶೇಷವಾಗಿ ಕಣ್ಸೆಳೆಯುತ್ತವೆ. ಒಂದೊಂದು ಮಂಡಲವೂ ಚೆಂದ.  ಸುದರ್ಶನ ಮಂಡಲ, ನಾಗತನು ತರ್ಪಣಮಂಡಲ, ವಾಸ್ತುಮಂಡಲ, ಅಘೋರ ಮಂಡಲಗಳನ್ನು ನೂರೈವತ್ತಕ್ಕೂ ಹೆಚ್ಚು ಮಂಡಲಗಳನ್ನು ಬಿಡಿಸುವ ಮೂಲಕ ಎಲ್ಲೆಡೆ ಹೆಮ್ಮೆಯ ಮಂಡಲ ಕಲಾವಿದರೆನ್ನಿಸಿಕೊಂಡಿದ್ದಾರೆ.
ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಹೀಗೆ ವಿವಿಧ ದೇವತೆಗಳ ಚಿತ್ರವನ್ನು ಮಂಡಲಗಳಲ್ಲಿ ಬಿಡಿಸುತ್ತಾರೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳು ಸೇರಿದಂತೆ ಆಂಧ್ರ, ತಮಿಳುನಾಡು, ಜೈಪುರದ ಶಿಮ್ಲಾ, ದೆಹಲಿ ಮುಂಬಯಿ ನಾಸಿಕ್  ಎಲ್ಲೆಡೆ ಇವರ ಮಂಡಲಗಳಿಗೆ ಭಾರಿ ಬೇಡಿಕೆಯಿದೆ. ಅಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಮಂಡಲ ರಚನೆ ಹಾಗೂ ಅಲಂಕಾರ ಮಾಡಿರುವುದು ಇವರಲ್ಲಿರುವ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

 

ಮುರಳೀಧರ ಪುತ್ರಾಯ

 

ಸುಮಾರು ಹದಿನೈದು ವರ್ಷಗಳಿಂದ ಇದೇ ವೃತ್ತಿ ಮಾಡಿಕೊಂಡು ಬರುತ್ತಿರುವ ಮುರಳೀಧರ್ ಪುತ್ರಾಯ ಅವರು 18,000 ಹೆಚ್ಚು ಮಂಡಲಗಳನ್ನು ಬಿಡಿಸಿದ್ದಾರೆ.

ಜಾರ್ಕಳ ಶ್ರೀಪ್ರಸಾದ್ ತಂತ್ರಿ, ಸಾಂತ್ಯಾರು ಲಕ್ಷ್ಮೀ ಪ್ರಸಾದ್ ಭಟ್ ,ಕೃಷ್ಣಮೂರ್ತಿ ಭಟ್, ಎಣ್ಣೆಹೊಳೆ ಅರುಣ್ ಭಟ್ ಇವರ ಕಲಾಸಾಧನೆಯನ್ನು ಗುರುತಿಸಿ ಸ್ಪೂರ್ತಿ ನೀಡುತ್ತಾ ಬಂದಿದ್ದಾರೆ. ಮುರಳಿಧರ ಪುತ್ರಾಯ ಅವರ ಮಂಡಲಗಳನ್ನು ನೀವೂ ಇಲ್ಲಿ ನೋಡಿ ಕಣ್ತುಂಬಿಕೊಳ್ಳಿ.

♦ರಾಮ್ ಅಜೆಕಾರ್