ಮಂಚಿಕೆರೆ: ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತ್ಯು

ಮಣಿಪಾಲ: ಇಲ್ಲಿನ ಮಂಚಿಕೆರೆಯ ನಾಗಬನದ ಸಮೀಪ ಶುಕ್ರವಾರ ಸಂಜೆ ಸುಜುಕಿ ಸ್ವಿಫ್ಟ್ ಕಾರು ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮಂಚಿಕೆರೆಯ ನಿವಾಸಿ ಉಮೇಶ್ ಮಡಿವಾಳ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು (ಅ.31) ಬೆಳಿಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಉಮೇಶ್ ಶುಕ್ರವಾರ ಸಂಜೆ ಬೈಕ್ ನಲ್ಲಿ ಮಣಿಪಾಲದ ಕಡೆಗೆ ಹೋಗುತ್ತಿದ್ದರು. ಈ ವೇಳೆ ರಾಂಗ್ ಸೈಡ್ ನಲ್ಲಿ ಬಂದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಉಮೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಮೃತಪಟ್ಟಿದ್ದಾರೆ.

ಅಮಾಯಕನ ಪ್ರಾಣ ತೆಗೆದ ಕಾರು ಚಾಲಕ:
ಕಾರು ಚಾಲಕನು ವಿಪರೀತ ಮದ್ಯಪಾನ ಮಾಡಿದ್ದನು ಎನ್ನಲಾಗಿದೆ. ಮದ್ಯದ ಅಮಾಲಿನಲ್ಲಿ ಅತೀ ವೇಗವಾಗಿ ಕಾರು ಚಾಲಾಯಿಸಿಕೊಂಡು ರಾಂಗ್ ಸೈಡ್ ಬಂದು ಉಮೇಶ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಆ ಮೂಲಕ ಅಮಾಯಕನ ಜೀವ ಬಲಿಪಡೆದುಕೊಂಡಿದ್ದಾನೆ‌. ಕಾರು ಕೇರಳ ನೋಂದಣಿ ಸಂಖ್ಯೆಯನ್ನು ಹೊಂದಿತ್ತು ಎನ್ನಲಾಗಿದೆ.

ಪರಾರಿಯಾಗಲು ಯತ್ನಿಸಿದ್ದ ಚಾಲಕ:
ಘಟನೆ ನಡೆದ ಬಳಿಕ ಕಾರು ಚಾಲಕ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಕೂಡಲೇ ಸ್ಥಳೀಯರು ಒಟ್ಟುಗೂಡಿ ಪರಾರಿಯಾಗಲು ಯತ್ನಿಸುತ್ತಿದ್ದ ಚಾಲಕನನ್ನು ಹಿಡಿದಿದ್ದಾರೆ. ಕುಡಿದು ವಾಹನ ಚಾಲಾಯಿಸಿದ್ದಲ್ಲದೆ, ಅಮಾಯಕನ ಪ್ರಾಣ ತೆಗೆದ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.