ಬೆಂಗಳೂರು: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೇಲಿಂದ 10 ರೂ ಮುಖಬೆಲೆ ನೋಟು ಎಸೆದ ವ್ಯಕ್ತಿ; ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಇಲ್ಲಿನ ಕೆಆರ್ ಮಾರುಕಟ್ಟೆಯ ಫ್ಲೈಓವರ್ ಮೇಲಿನಿಂದ ವ್ಯಕ್ತಿಯೊಬ್ಬ ಹಣ ಎಸೆದಿರುವ ಘಟನೆ ಮಂಗಳವಾರದಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಕಪ್ಪು ಶರ್ಟ್ ಧರಿಸಿರುವ ಫ್ಲೈಓವರ್‌ನಲ್ಲಿದ್ದ ಅರುಣ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಹಣವನ್ನು ಎಸೆಯುತ್ತಿರುವುದು ಕಂಡುಬಂದಿದೆ. ಆತ ಎಸೆದ ಹಣದಲ್ಲಿ 10 ರೂಪಾಯಿ ಮುಖಬೆಲೆಯ ನೋಟುಗಳಿದ್ದವು.

ಕೂಡಲೇ ಫ್ಲೈಓವರ್‌ ಕೆಳಗೆ ಜಮಾಯಿಸಿದ ಜನರು ನೋಟುಗಳನ್ನು ಹೆಕ್ಕಲು ಆರಂಭಿಸಿದರು. ಹಣ ಹೆಕ್ಕುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಇದರಿಂದಾಗಿ ಕೆಲ ನಿಮಿಷಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಟಿವಿ9 ಕನ್ನಡ ಚಾನೆಲ್ ಗೆ ನೀಡಿದ ಹೇಳಿಕೆಯಲ್ಲಿ, ಕಬಡ್ಡಿ ಆಟಗಾರ ಮತ್ತು ಈವೆಂಟ್ ಮ್ಯಾನೇಜರ್ ಆಗಿರುವ ಅರುಣ್, ತಾನು ಮಾನಸಿಕವಾಗಿ ಸ್ಥಿರವಾಗಿದ್ದೇನೆ ಮತ್ತು ಈ ರೀತಿ ಮಾಡಿರುವುದನ್ನು ವಿವರಿಸಲು ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ.

“ನಾನು ಯಾವುದೇ ಕೆಟ್ಟ ಉದ್ದೇಶದಿಂದ ಹಣವನ್ನು ಎಸೆಯಲಿಲ್ಲ. ನಾನು ಕೂಡ ವಿದ್ಯಾವಂತ. ನಾನು ಇದನ್ನು ಸಾಮಾಜಿಕ ಜಾಲತಾಣಗಳಿಗಾಗಿ ಮಾಡಿಲ್ಲ. ದಯವಿಟ್ಟು ನನಗೆ ಸ್ವಲ್ಪ ಸಮಯ ನೀಡಿ, ನಾನು ಅದನ್ನು ಏಕೆ ಮಾಡಿದೆ ಎಂದು ನಾನು ವಿವರಿಸುತ್ತೇನೆ” ಎಂದು ಆತ ಹೇಳಿರುವುದಾಗಿ ಮಾಧ್ಯಮ ವರದಿಯಾಗಿದೆ.

ಹಣವನ್ನು ಎಸೆದ ಬಳಿಕ ದ್ವಿಚಕ್ರ ವಾಹನದಲ್ಲಿ ಅರುಣ್ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆಆರ್ ಮಾರುಕಟ್ಟೆ ಪೊಲೀಸರು ನಾಗರಭಾವಿಯಲ್ಲಿರುವ ಅರುಣ್ ನಿವಾಸಕ್ಕೆ ವಿವರಣೆ ಕೋರಿ ನೋಟಿಸ್ ಕಳುಹಿಸಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ. ಪ್ರಕರಣ ದಾಖಲಿಸಿಕೊಂದಿರುವ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.