ಮುಂಡ್ಕೂರು: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಎಂಬಲ್ಲಿ ಗುರುವಾರ 54 ವರ್ಷದ ವ್ಯಕ್ತಿಯೊಬ್ಬರು ಸೀಮೆಎಣ್ಣೆ ಸುರಿದು ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತರನ್ನು ಕೃಷ್ಣ ಮೂಲ್ಯ ಎಂದು ಗುರುತಿಸಲಾಗಿದ್ದು, ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಬುಧವಾರ ಕೃಷ್ಣ ಅವರ ಸೊಸೆಯ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಮೃತರು ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಆ ಕೂಡಲೇ ಬೆಂಕಿಯನ್ನು ನಂದಿಸಲಾಗಿತ್ತಾದರೂ ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದವು. ಇದಾದ ಬಳಿಕ ಕೃಷ್ಣ ಅವರು ತಮ್ಮ ಮನೆಗೆ ಹಿಂದಿರುಗಿದ್ದು, ಆತ್ಮಹತ್ಯೆ ಮಾಡಲು ಕಾರಣವಾಗಿದ್ದಾರೆ ಎನ್ನಲಾದವರ ಹೆಸರು ಬರೆದಿಟ್ಟು, ತನ್ನ ಮೇಲೆ ಮಾಟ ಮಂತ್ರ ಮಾಡಿದ್ದು ತಾನು ಮಾನಸಿಕ ನೆಮ್ಮದಿ ಕಳೆದುಕೊಂಡಿರುವುದಾಗಿ ಪತ್ರ ಬರೆದಿಟ್ಟಿದ್ದಾರೆ.
ಬಳಿಕ ತನ್ನ ಕಾರಿನೊಳಗೆ ಸೀಮೆ ಎಣ್ಣೆ ಸುರಿದುಕೊಂದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಟಿಒಐ ವರದಿ ಮಾಡಿದೆ.
ವರದಿಗಳ ಪ್ರಕಾರ ಕೃಷ್ಣ ಮೂಲ್ಯ ಅವರ ತಂದೆಗೆ ಹತ್ತು ಮಕ್ಕಳಿದ್ದು ಆಸ್ತಿಯನ್ನು ಸಮಭಾಗ ಮಾಡಿದ್ದರು. ಆದರೆ ಒಂಟಿಯಾಗಿದ್ದರೂ ಕೂಡಾ ಪಿತ್ರಾರ್ಜಿತ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡುವಂತೆ ಅವರು ಅವರ ಸಹೋದರ-ಸಹೋದರಿಯರನ್ನು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಎರಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.