ಮಂಗಳೂರು: ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸುವ ವೇಳೆ ಹಳಿಗೆ ಬಿದ್ದ ವೃದ್ಧ ಪ್ರಯಾಣಿಕರೊಬ್ಬರನ್ನು ರೈಲ್ವೆ ಪಾಯಿಂಟ್ಸ್ಮ್ಯಾನ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಸೋಮವಾರ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ. ಪಾಯಿಂಟ್ಸ್ಮ್ಯಾನ್ ಅವರ ತ್ವರಿತ ಕಾರ್ಯಾಚರಣೆಯಿಂದ ಸಂಭವನೀಯ ಭೀಕರ ಅಪಘಾತವೊಂದು ತಪ್ಪಿದೆ.
ಮುಂಬೈನಿಂದ ಮಂಗಳೂರು ಕಡೆಗೆ ಬರುತ್ತಿದ್ದ ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ವೃದ್ಧ ಪ್ರಯಾಣಿಕರೊಬ್ಬರು ರೈಲಿನಿಂದ ಕೆಳಗಿಳಿದು ನಿಲ್ದಾಣದಲ್ಲಿದ್ದ ಅಂಗಡಿಗೆ ತೆರಳಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು.
ಅಂಗಡಿಯಲ್ಲೇ ತಾನು ಖರೀದಿಸಿದ್ದ ವಸ್ತುವೊಂದನ್ನು ಬಿಟ್ಟು ಬಂದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ತರಲು ವೃದ್ಧರು ಅವಸರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಹಳಿಗೆ ಬಿದ್ದಿದ್ದು, ರೈಲಿನ ಚಕ್ರಗಳಡಿ ಸಿಲುಕುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಈ ವೇಳೆ ಕರ್ತವ್ಯದಲ್ಲಿದ್ದ ರೈಲ್ವೆ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ಘಟನೆ ಗಮನಿಸಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಹಳಿಗೆ ಬಿದ್ದಿದ್ದ ವೃದ್ಧರನ್ನು ರೈಲಿನಿಂದ ದೂರಕ್ಕೆ ಎಳೆದು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ವೃದ್ಧರ ಜೀವ ಉಳಿದಿದೆ. ಅವರ ಸಾಹಸಕ್ಕೆ ರೈಲ್ವೆ ಇಲಾಖೆ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.















