ಬೆಳ್ತಂಗಡಿ: ರಕ್ಷಿತ್ ಶಿವರಾಂ ಸೋದರ ಮಾವ ಅಪಘಾತದಲ್ಲಿ ನಿಧನ

ಬೆಳ್ತಂಗಡಿ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂ ಸೋದರ ಮಾವ ಸ್ಕೂಟರ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಶೇಖರ್ ಬಂಗೇರ ಹೇರಾಜೆ (65)ಮೃತರಾದವರು.

ಗುರುವಾರ ರಾತ್ರಿ ಪಟ್ಟಣದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್‌ನಿಂದ ಪಾರ್ಸಲ್ ಖರೀದಿಸಿದ್ದ ಅವರು, ರಸ್ತೆ ದಾಟುವಾಗ ಸ್ಕೂಟರ್‌ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶೇಖರ್ ಬಂಗೇರ ಹೇರಾಜೆ ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ. ಮುಗ್ಗ ಗುತ್ತು ಮನೆತನದ ಟ್ರಸ್ಟ್‌ನ ಖಜಾಂಚಿ. ಲಾಯಿಲ ರಾಘವೇಂದ್ರ ಮಠದ ಆಡಳಿತ ಮಂಡಳಿಯ ಖಜಾಂಚಿ. ‌ಬೆಳ್ತಂಗಡಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು.

ಸ್ಕೂಟರ್‌ನಲ್ಲಿದ್ದ ಬೆಳ್ತಂಗಡಿಯ ಗೇರುಕಟ್ಟೆ ನಿವಾಸಿ ಅನುಷಾ (19) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.