ಕೇಬಲ್ ಮಾಲೀಕನಿಗೆ ಚೂರಿ ತೋರಿಸಿ ಬೆದರಿಕೆ ಹಾಕಿದ ಪ್ರಕರಣ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕಾರ್ಕಳ: 16 ವರ್ಷಗಳ ಹಿಂದೆ ಕಾರ್ಕಳ‌ದ ಕುಕ್ಕುಂದೂರು ಗ್ರಾಮದ ನಿವಾಸಿ, ಕೇಬಲ್ ವ್ಯವಹಾರ ನಡೆಸುತ್ತಿದ್ದ ಪ್ರಶಾಂತ್ ನಾಯಕ್ ಎಂಬವರಿಗೆ ಚೂರಿ ತೋರಿಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜೂ. 14ರಂದು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ತಮಿಳುನಾಡು ಮೂಲದ ಬೆಳ್ತಂಗಡಿ ಕಾಶಿಬೆಟ್ಟು ನಿವಾಸಿ ಶಕ್ತಿವೇಲು ಬಂಧಿತ ಆರೋಪಿ. ಈತ ಕುಖ್ಯಾತ ರೌಡಿ, ಮಂಗಳೂರು ಕೊಂಚಾಡಿಯ ಪಾಂಡು ಹಾಗೂ ಪ್ರಕಾಶ್ ರಾವ್ ಎಂಬವರೊಂದಿಗೆ ಸೇರಿಕೊಂಡು 2006 ಡಿಸೆಂಬರ್ 7 ರಂದು ಪ್ರಶಾಂತ್ ನಾಯಕ್ ಗೆ ಚೂರಿ ತೋರಿಸಿ ಬೆದರಿಕೆ ಹಾಕಿದ್ದನು.
ಪ್ರಕರಣ ದಾಖಲಾಗುತ್ತಿದ್ದಂತೆ ಪಾಂಡ್ ಮತ್ತು ಪ್ರಕಾಶ್ ರಾವ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಶಕ್ತಿವೇಲು ಕಳೆದ 16 ವರ್ಷಗಳಿಂದ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದನು.

ಕಾರ್ಕಳ ನ್ಯಾಯಾಲಯವು ಆರೋಪಿ ದಸ್ತಗಿರಿಗಾಗಿ ವಾರಂಟ್ ಹೊರಡಿಸಿತ್ತು. ಜೂ. 13ರಂದು ಶಕ್ತಿವೇಲು ಬೆಳ್ತಂಗಡಿಯಲ್ಲಿ ಇರುವ ಮಾಹಿತಿ ಲಭಿಸಿದ್ದು, ಅದರಂತೆ ಕಾರ್ಕಳ ಪೊಲೀಸರು ಬೆಳ್ತಂಗಡಿ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬೆಳ್ತಂಗಡಿಯಲ್ಲಿ ಬಂಧಿಸಿದ್ದಾರೆ. ಜೂ. 14 ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.